ರಾಮೇಶ್ವರಂ (ತಮಿಳುನಾಡು): 12ನೇ ತರಗತಿಯ ವಿದ್ಯಾರ್ಥಿನಿಯನ್ನು ಹಾಡಹಗಲೇ ಇರಿದು ಕೊಂದ ಆರೋಪದ ಮೇಲೆ 21 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆರೋಪಿಯ ಪ್ರೇಮ ಪ್ರಸ್ತಾಪವನ್ನು ವಿದ್ಯಾರ್ಥಿನಿ ತಿರಸ್ಕರಿಸಿದ್ದಾಳೆ ಎಂದು ವರದಿಯಾಗಿದೆ. ಸಂತ್ರಸ್ತೆಯು ತನ್ನ ಕುಟುಂಬದೊಂದಿಗೆ ರಾಮೇಶ್ವರಂ ಬಳಿಯ ಚೇರಂಕೊಟ್ಟೈನಲ್ಲಿ ವಾಸಿಸುತ್ತಿದ್ದಳು.
ಅದೇ ಪ್ರದೇಶದ ನಿವಾಸಿಯಾದ ಮುನಿಯರಾಜ್ ಎಂದು ಗುರುತಿಸಲಾದ ಆರೋಪಿಯು ವಿದ್ಯಾರ್ಥಿನಿಯನ್ನು ಹಲವು ದಿನಗಳಿಂದ ಹಿಂಬಾಲಿಸುತ್ತಿದ್ದ ಮತ್ತು ಪದೇ ಪದೆ ನಿರಾಕರಿಸಿದರೂ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೀನುಗಾರರಾಗಿರುವ ವಿದ್ಯಾರ್ಥಿನಿಯ ತಂದೆ ಮರಿಯಪ್ಪನ್, ಇತ್ತೀಚೆಗೆ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದರು ಮತ್ತು ಆಕೆಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ಮತ್ತು ಸ್ಥಳೀಯ ವರದಿಗಳು ತಿಳಿಸಿವೆ.
ಆಕೆ ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮತ್ತು ಆಕೆಯ ಕುಟುಂಬದವರ ಎಚ್ಚರಿಕೆಯಿಂದ ಕೋಪಗೊಂಡ ಯುವಕ, ಬುಧವಾರ ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಲು ನಿರ್ಧರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ರಸ್ತೆಯಲ್ಲಿಯೇ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ, ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಘಟನೆಯಲ್ಲಿ ವಿದ್ಯಾರ್ಥಿನಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಆಸ್ಪತ್ರೆಗೆ ಕರೆಯೊಯ್ಯುವ ಮುನ್ನವೇ ಸಾವಿಗೀಡಾಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸ್ಥಳದಲ್ಲಿದ್ದವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸ್ ಠಾಣೆಯ ಸಿಬ್ಬಂದಿ ಶವವನ್ನು ಸಾಗಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ಲೆ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ, ವಿಶೇಷ ಪೊಲೀಸ್ ತಂಡವು ಆತನನ್ನು ಪತ್ತೆಹಚ್ಚಿದೆ. ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಕೊಲೆಯ ಬಗ್ಗೆ ತಿಳಿದು ಆಘಾತವಾಯಿತು. ಶಾಲೆಗೆ ಹೋಗುವ ವಿದ್ಯಾರ್ಥಿನಿಯೂ ಸುರಕ್ಷಿತವಾಗಿಲ್ಲದ ಈ ಪರಿಸ್ಥಿತಿಗೆ ಯಾರು ಹೊಣೆ? ಹಗಲು ಹೊತ್ತಿನಲ್ಲಿ ಶಾಲಾ ಬಾಲಕಿಯನ್ನು ಕೊಲೆ ಮಾಡುವ ಧೈರ್ಯ ಆರೋಪಿಗೆ ಎಲ್ಲಿಂದ ಬಂತು' ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ.
ತಮಿಳುನಾಡು ಸರ್ಕಾರವನ್ನು ಟೀಕಿಸಿದ ಅವರು, 'ಸ್ಟಾಲಿನ್ ಮಾದರಿಯ ಡಿಎಂಕೆ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದ ಪರಿಣಾಮವೇ ಮಹಿಳೆಯರ ಸುರಕ್ಷತೆಯ ಮೇಲೆ ಇಂತಹ ಘೋರ ಅಪರಾಧಗಳು ನಡೆಯುತ್ತಿವೆ. ಶಂಕಿತನಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು' ಎಂದು ಸರ್ಕಾರವನ್ನು ಒತ್ತಾಯಿಸಿದರು.