ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ಹೆತ್ತ ತಾಯಿ ಮತ್ತು ಮಲತಂದೆ ತಮ್ಮ 16 ವರ್ಷದ ಮಗನಿಗೆ ಉಗ್ರ ಸಂಘಟನೆಗೆ ಸೇರುವಂತೆ ಒತ್ತಡ ಹಾಕುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
16 ವರ್ಷದ ಬಾಲಕ ಪೊಲೀಸರಿಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನನ್ನ ತಾಯಿ ಮತ್ತು ಮಲತಂದೆ ಮೂಲಭೂತವಾದಿ ಚಟುವಟಿಕೆಗಳ ವಿಡಿಯೋಗಳನ್ನು ತೋರಿಸುವ ಮೂಲಕ ನನ್ನನ್ನು ಭಯೋತ್ಪಾದಕ ಸಂಘಟನೆಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಾಲಕ ಆರೋಪಿಸಿದ್ದಾನೆ.
ಬಾಲಕನ ದೂರಿನ ಮೇರೆಗೆ ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಬಾಲಕನ ದೂರಿನ ಪ್ರಕಾರ, ಕುಟುಂಬವು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸಿಸುತ್ತಿದ್ದಾಗ ಆತನಿಗೆ ಮೂಲಭೂತವಾದದ ಬಗ್ಗೆ ತಿಳಿಸಲಾಗಿದೆ. "ನಾವು ಪ್ರಸ್ತುತ ಬಾಲಕ ತನ್ನ ದೂರಿನಲ್ಲಿ ಮಾಡಿರುವ ಆರೋಪಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಅಧಿಕಾರಿ ತಿಳಿಸಿದ್ದಾರೆ.