ಭೋಪಾಲ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಖಾಸಗಿ ಬಸ್‌ನಲ್ಲಿ ರಾಷ್ಟ್ರೀಯ ಮಟ್ಟದ ಮಹಿಳಾ ಶೂಟರ್ ಒಬ್ಬರೊಂದಿಗೆ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿರುವ ಆರೋಪವೊಂದು ಕೇಳಿಬಂದಿದೆ.
ಪುಣೆ ಮೂಲದ ರಾಷ್ಟ್ರೀಯ ಮಟ್ಟದ ಮಹಿಳಾ ಶೂಟರ್ ಇತ್ತೀಚೆಗೆ ರಾಷ್ಟ್ರಮಟ್ಟದ ಸ್ಪರ್ಧೆಗಾಗಿ ಭೋಪಾಲ್‌ಗೆ ಪ್ರಯಾಣಿಸುತ್ತಿದ್ದರು. ಇಂದೋರ್ ಮೂಲಕ ಪುಣೆಗೆ ಹಿಂತಿರುಗಲು ಸೋಮವಾರ ಖಾಸಗಿ ಬಸ್ ಹತ್ತಿದ್ದರು.
ಈ ವೇಳೆ ಟಿಕೆಟ್ ಬಗ್ಗೆ ವಿಚಾರಿಸುವ ನೆಪದಲ್ಲಿ ಕಂಡಕ್ಟರ್ ತನ್ನನ್ನು ಅನುಚಿತವಾಗಿ ಮುಟ್ಟಿದ್ದಾರೆ ಎಂದು ಆಟಗಾರ್ತಿ ಆರೋಪಿಸಿದ್ದಾರೆ.
ಇಂದೋರ್‌ನ ರಾಜೇಂದ್ರ ನಗರದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಹಿಳಾ ಆಟಗಾರ್ತಿ ದೂರು ಹೇಳಿದ್ದು, ಈ ವೇಳೆ ಸ್ಥಳದಲ್ಲಿ ಹೈಡ್ರಾಮಾವೇ ಸೃಷ್ಟಿಯಾಗಿದೆ.
ಘಟನೆ ಬೆನ್ನಲ್ಲೇ ಬಸ್ ಚಾಲಕ ಮತ್ತು ಕಂಡಕ್ಟರ್ ಸ್ಥಳದಿಂದ ಕಾಲ್ಕಿತ್ತಿದ್ದು, ಈ ವೇಳೆ ಬಸ್ ನಲ್ಲಿದ್ದ ಇತರೆ ಪ್ರಯಾಣಿಕರು ತಬ್ಬಿಬ್ಬುಗೊಂಡರು.
ಬಸ್ ಬೆಳಗಿನ ಜಾವ 1.30 ರ ಸುಮಾರಿಗೆ ಇಂದೋರ್ ತಲುಪಿತ್ತು. ಸಮಸ್ಯೆ ಉಲ್ಬಣಗೊಂಡ ನಂತರ ಪರ್ಯಾಯ ಚಾಲಕ ಮತ್ತು ಕಂಡಕ್ಟರ್‌ರಿಗೆ ಬಸ್ ನೀಡಿ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಮಾಡಲಾಯಿತು ಎಂದು ಇಂದೋರ್ ಅಪರಾಧ ವಿಭಾಗದ ಹೆಚ್ಚುವರಿ ಡಿಸಿಪಿ ರಾಜೇಶ್ ದಂಡೋಟಿಯಾ ಅವರು ಹೇಳಿದ್ದಾರೆ.
ಈ ನಡುವೆ ಘಟನೆ ಸಂಬಂಧ ಆಟಗಾರ್ತಿ ಬಳಿ ಲಿಖಿತ ದೂರು ಕೇಳಿದಾಗ ಕುಟುಂಬದೊಂದಿಗೆ ಸಮಾಲೋಚಿಸಿ ದೂರು ನೀಡುವುದಾಗಿ ತಿಳಿಸಿದ್ದಾರೆಂದು ಹೇಳಿದ್ದಾರೆ.