ವಯನಾಡು: ಕೇರಳದಲ್ಲಿ ಅತೀ ದೊಡ್ಡ ಹಣ ಕಳ್ಳಸಾಗಾಣಿಕೆಯನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದು, ಆರೋಪಿಗಳಿಂದ ಬರೊಬ್ಬರಿ 3.15 ಕೋಟಿ ರೂ ನಗದನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಕಾರಿನಿಂದ ಗುರುವಾರ 3.15 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕೇರಳದ ಕೋಜಿಕೋಡ್ ವಿಭಾಗದ ಕಸ್ಟಮ್ಸ್ (ತಡೆಗಟ್ಟುವಿಕೆ) ಕಮಿಷನರೇಟ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 'ಶಂಕಾಸ್ಪದ ವಾಹನದ ಚಲನವಲನಗಳನ್ನು ಹಲವಾರು ತಿಂಗಳುಗಳಿಂದ ಕಣ್ಗಾವಲಿನಲ್ಲಿ ಇರಿಸಲಾಗಿತ್ತು.
ಗುಪ್ತಚರ ಮಾಹಿತಿಯ ಮೇರೆಗೆ, ಪೊಲೀಸರು ಮತ್ತು ಇತರ ಕೇಂದ್ರ ಸಂಸ್ಥೆಗಳ ಬೆಂಬಲದೊಂದಿಗೆ ಶುಕ್ರವಾರ ಬೆಳಗಿನ ಜಾವ ಮಾನಂತವಾಡಿಯಲ್ಲಿ ಕಾರನ್ನು ತಡೆಹಿಡಿಯಲಾಯಿತು' ಎಂದು ಹೇಳಿದೆ.
"ಜಂಟಿ ಆಯುಕ್ತ ಶಶಿಕಾಂತ್ ಶರ್ಮಾ ಮತ್ತು ಉಪ ಆಯುಕ್ತ ಶ್ಯಾಮ್ ನಾಥ್ ಎಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯು, ಬೆಂಗಳೂರಿನಿಂದ ವಾರಕ್ಕೊಮ್ಮೆ ನಿಷಿದ್ಧ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿರುವ ಗ್ಯಾಂಗ್ ಬಗ್ಗೆ ವ್ಯಾಪಕ ಗುಪ್ತಚರ ಮಾಹಿತಿಯನ್ನು ಆಧರಿಸಿತ್ತು" ಎಂದು ಕಸ್ಟಮ್ಸ್ ತಿಳಿಸಿದೆ.
ಕೈ ಇಟ್ಟಲೆಲ್ಲಾ ದುಡ್ಡೋ ದುಡ್ಡು..
ಇನ್ನು ಕಾರಿನ ಪರಿಶೀಲನೆ ವೇಳೆ ಅದರಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಕಾರಿನ ಸೀಟು, ಡೋರ್ ನ ಖಾಲಿ ಜಾಗಗಳಲ್ಲಿ ತುಂಬಲಾಗಿದ್ದ ಹಣವನ್ನು ಅಧಿಕಾರಿಗಳು ಒಂದೊಂದಾಗಿ ಹೊರಕ್ಕೆ ತೆಗೆದು ವಶಕ್ಕೆ ಪಡೆದಿದ್ದಾರೆ. ಈ ರೀತಿ ವಶಕ್ಕೆ ಪಡೆದ ಹಣದ ಮೌಲ್ಯವೇ ಬರೊಬ್ಬರಿ 3.15 ಕೋಟಿ ರೂ ಗಳು ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ಹಣ ಕಳ್ಳಸಾಗಣೆ ಪ್ರಕರಣದಲ್ಲಿ ವಡಕರದ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಈ ಹಣ ಸಲ್ಮಾನ್ ಕಂಡತಿಲ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಈ ಸಂಬಂಧ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.