ಗೋಧ್ರಾ: ಗುಜರಾತ್ ನ ಗೋಧ್ರಾ ಪಟ್ಟಣದ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗೋಧ್ರಾದ ಗಂಗೋತ್ರಿ ನಗರದಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗಿನ ಜಾವ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತರನ್ನು ಆಭರಣ ವ್ಯಾಪಾರಿ ಕಮಲ್ ದೋಷಿ (50), ಅವರ ಪತ್ನಿ ದೇವಲ್ಬೆನ್(45) ಮತ್ತು ಅವರ ಪುತ್ರರಾದ ದೇವ್(24) ಹಾಗೂ ರಾಜ್ (22) ಎಂದು ಗುರುತಿಸಲಾಗಿದೆ. ಇಡೀ ಕುಟುಂಬ ಮಲಗಿದ್ದಾಗ ಬೆಂಕಿ ಕಾಣಿಸಿಕೊಂಡಿದ್ದು, ಅವರು ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಠಾಣಾಧಿಕಾರಿ ಆರ್.ಎಂ. ವಾಸಯ್ಯ ಅವರು ತಿಳಿಸಿದ್ದಾರೆ.
ದೋಶಿ ಅವರ ಕುಟುಂಬವು ಅವರ ಒಬ್ಬ ಪುತ್ರನ ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆಸುತ್ತಿತ್ತು ಮತ್ತು ಶುಕ್ರವಾರ ಬೆಳಗ್ಗೆ ವಾಪಿಗೆ ತೆರಳಬೇಕಿತ್ತು.
"ಪ್ರಾಥಮಿಕ ತನಿಖೆಯಲ್ಲಿ, ನೆಲ ಮಹಡಿಯಲ್ಲಿ ಸ್ಪ್ಲಿಟ್ ಏರ್ ಕಂಡಿಷನರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿದ್ದ ಮರದ ಪೀಠೋಪಕರಣಗಳಿಗೆ ಬೆಂಕಿ ಹೊತ್ತಿಕೊಂಡಿದೆ. ನಂತರ ಮನೆಯಲ್ಲಿ ತುಂಬಿಕೊಂಡ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ" ಎಂದು ವಾಸಯ್ಯ ಹೇಳಿದ್ದಾರೆ.
ಬೆಂಕಿಯ ಬಗ್ಗೆ ಕರೆ ಬಂದ ನಂತರ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನು ಪತ್ತೆ ಮಾಡಿದ್ದಾರೆ. ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.