ಪುರಿ: ವಿಸ್ಮಯಗಳ ಆಗರವಾಗಿರುವ ಒಡಿಶಾದ ಪುರಿ ಜಗನ್ನಾಥ ದೇಗುಲದಲ್ಲಿ ಮತ್ತೊಂದು ಪವಾಡ ನಡೆದಿದೆ ಎಂದು ಹೇಳಲಾಗಿದ್ದು, ಕೋಮದಲ್ಲಿದ್ದ ಪುಟ್ಟ ಬಾಲಕ ದೇಗುಲದ ಆವರಣದಲ್ಲಿ ಕಣ್ಣು ಬಿಟ್ಟಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು... ಕೆಲವು ದಿನಗಳ ಹಿಂದೆ, ಪುರಿ ಶ್ರೀಮಂದಿರದಲ್ಲಿ ಮರೆಯಲಾಗದ ದೃಶ್ಯವೊಂದು ನಡೆದಿದ್ದು, ರಾಜಸ್ಥಾನ ಮೂಲದ ವ್ಯಕ್ತಿ ಪ್ರಕಾಶ್ ಭೋಯ್ ಎಂಬುವವರು ಕೋಮಾದಲ್ಲಿ ಚಲನರಹಿತವಾಗಿ ಮಲಗಿದ್ದ ತನ್ನ ಮಗ ನಿಖಿಲ್ ನನ್ನು ಹೊತ್ತುಕೊಂಡು ಪುರಿಯ ಜಗನ್ನಾಥ ದೇವಾಲಯಕ್ಕೆ ಬಂದಿದ್ದಾರೆ.
ದೇಗುಲದ ಸಿಂಹ ದ್ವಾರದ ಮುಂದೆ ನಿಂತು ಜಗನ್ನಾಥನಲ್ಲಿ ತಮ್ಮ ಆಕ್ರಂದನ ತೋಡಿಕೊಂಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಅಸಹಾಯಕ ತಂದೆಯೋರ್ವ ತನ್ನ ಕೈಗಳಲ್ಲಿ ಕೋಮಾಕ್ಕೆ ಜಾರಿದ್ದ ಮಗನನ್ನು ಹೊತ್ತು ಜಗನ್ನಾಥನ ದೇಗುಲಕ್ಕೆ ಬಂದಿದ್ದಾರೆ. ಈ ವೇಳೆ ಸಿಬ್ಬಂದಿ ಅವರನ್ನು ತಡೆದಿದ್ದಾರೆಯಾದರೂ ಸಿಬ್ಬಂದಿಗೆ ತನ್ನ ಮಗನ ಪರಿಸ್ಥಿತಿ ಕುರಿತು ಅವರು ತಿಳಿಸಿದ್ದಾರೆ.
ಬಳಿಕ ಸಿಬ್ಬಂದಿ ಕೂಡ ಅವರನ್ನು ಶ್ರೀಮಂದಿರದೊಳಗೆ ಹೋಗಲು ಬಿಟ್ಟಿದ್ದು ಗರ್ಭಗುಡಿ ಬಳಿ ತೆರಳಿದ ತಂದೆ ಮಗವನ್ನು ಜಗನ್ನಾಥನ ಮುಂದಿಟ್ಟು ಆತನನ್ನು ಉಳಿಸಿಕೊಡುವಂತೆ ಅಳುತ್ತಾ ಬೇಡಿಕೊಂಡಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಕಣ್ಣು ಬಿಟ್ಟ ಬಾಲಕ
ಇನ್ನು ತಂದೆ ಜಗನ್ನಾಥನ ಬಳಿ ಬೇಡಿಕೊಳ್ಳುತ್ತಿದ್ದಂತೆಯೇ ಇತ್ತ ನೆಲದ ಮೇಲೆ ಇದ್ದ ಬಾಲಕ ಅಚ್ಚರಿ ರೀತಿಯಲ್ಲಿ ತಲೆ ಅಲ್ಲಾಡಿಸಿದ್ದಾನೆ. ಅಲ್ಲದೆ ಕಣ್ಣು ಬಿಟ್ಟಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಕೂಡಲೇ ಅಲ್ಲಿ ನೆರೆದಿದ್ದವರು ಜಗನ್ನಾಥನಿಗೆ ಘೋಷಣೆ ಕೂಗಿದರು.
ಶ್ರೀಮಂದಿರದ ಮುಂದೆ ಮತ್ತೆ ನಿಂತು, ಕೃತಜ್ಞತೆ ಮತ್ತು ಭಯದಿಂದ ನಡುಗುವ ಧ್ವನಿಯೊಂದಿಗೆ ತಂದೆ ಪ್ರಕಾಶ್ ಭೋಯ್ ತನ್ನ ಭಾವನೆಗಳನ್ನು ಹಂಚಿಕೊಂಡರು.
ಈ ವೇಳೆ ಮಾತನಾಡಿದ ತಂದೆ ಪ್ರಕಾಶ್ ಭೋಯ್, 'ನಾನು ಸರ್ವಶಕ್ತನನ್ನು ನಂಬುತ್ತೇನೆ. ನನ್ನ ಮಗನ ಚಿಕಿತ್ಸೆಗೆ ನನ್ನ ಬಳಿ ಹಣವಿಲ್ಲ. ಪುರಿ ಆಡಳಿತ ಅಥವಾ ರಾಜ್ಯ ಸರ್ಕಾರ ನನ್ನ ಮಗನ ಚಿಕಿತ್ಸೆಯಲ್ಲಿ ನನಗೆ ಸಹಾಯ ಮಾಡಿದರೆ, ನಾನು ಕೃತಜ್ಞನಾಗಿದ್ದೇನೆ. ನಾನು ಇಲ್ಲಿ ಭಗವಾನ್ ಜಗನ್ನಾಥನನ್ನು ಮಾತ್ರ ನಂಬಿದ್ದೇನೆ ಎಂದು ಹೇಳಿದರು.
ಅಪಘಾತವೊಂದರಲ್ಲಿ ಮಗ ನಿಖಿಲ್ ಕೋಮಾಕ್ಕೆ ಜಾರಿದ್ದ. ಆತನ ಚಿಕಿತ್ಸೆಗೆ ನಾನು ಸಾಕಷ್ಟು ಹೋರಾಡುತ್ತಿದ್ದೇನೆ. ನನ್ನ ಬಳಿ ಇದ್ದ ಎಲ್ಲ ಹಣವನ್ನು ಅವನ ಚಿಕಿತ್ಸೆಗೆ ವ್ಯಯಿಸಿದ್ದೇನೆ. ವೈದ್ಯರೂ ಚಿಕಿತ್ಸೆಗೆ ಇನ್ನೂ ಸಾಕಷ್ಟು ಹಣ ಬೇಕು ಎಂದು ಹೇಳುತ್ತಿದ್ದಾರೆ ಎಂದು ಎಂದರು.
ಸಹಾಯಕ್ಕೆ ಒಡಿಶಾ ಸಿಎಂಗೆ ಮನವಿ
ಇನ್ನು ಇದೇ ತಂದೆ ಪ್ರಕಾಶ್ ಭೋಯ್ ತನ್ನ ಮಗನ ಚಿಕಿತ್ಸೆಗೆ ಸ್ಪಂದಿಸುವಂತೆ ಒಡಿಶಾ ಸಿಎಂ ಮೋಹನ್ ಮಾಝಿಗೂ ಮನವಿ ಮಾಡಿದ್ದಾರೆ. ಒಡಿಶಾ ಸರ್ಕಾರ ಸಹಾಯ ಮಾಡಲು ಸಾಧ್ಯವಾದರೆ, ಅದು ದೊಡ್ಡ ಸಹಾಯವಾಗುತ್ತದೆ. ಆದರೂ ನಾನು ಯಾರನ್ನೂ ದೂಷಿಸುವುದಿಲ್ಲ. ದೇವರ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.