ಚೆನ್ನೈ / ಈರೋಡ್: ಮಾಜಿ ಸಚಿವ ಮತ್ತು ಉಚ್ಚಾಟಿತ ಎಐಎಡಿಎಂಕೆ ಹಿರಿಯ ನಾಯಕ ಕೆಎ ಸೆಂಗೋಟ್ಟಯ್ಯನ್ ಅವರು ಗುರುವಾರ ನಟ, ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷ ಸೇರುವ ಸಾಧ್ಯತೆ ಇದೆ.
ಗೋಬಿಚೆಟ್ಟಿಪಾಳಯಂ ಶಾಸಕರಾಗಿರುವ ಸೆಂಗೊಟ್ಟೈಯನ್ ಅವರು ಬುಧವಾರ ವಿಜಯ್ ಅವರನ್ನು ಭೇಟಿ ಮಾಡಿ, ಟಿವಿಕೆ ಸೇರುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
"ಅವರು ಶೀಘ್ರದಲ್ಲೇ ಟಿವಿಕೆ ಸೇರಲಿದ್ದಾರೆ. ಬುಧವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅವರು ಪ್ರಸ್ತುತ ಚೆನ್ನೈನಲ್ಲಿದ್ದಾರೆ" ಎಂದು ಸೆಂಗೋಟ್ಟಯ್ಯನ್ ಅವರ ಆಪ್ತರೊಬ್ಬರು ತಿಳಿಸಿದ್ದಾರೆ.
1977 ರಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂದಾಗ ಸತ್ಯಮಂಗಲಂನಿಂದ ಮೊದಲ ಬಾರಿಗೆ ಗೆದ್ದು, ಒಂಬತ್ತು ಬಾರಿ ಶಾಸಕರಾಗಿರುವ ಸೆಂಗೋಟ್ಟಯ್ಯನ್, ಮಾಜಿ ಮುಖ್ಯಮಂತ್ರಿಗಳಾದ ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ಕಟ್ಟಾ ಬೆಂಬಲಿಗ ಎಂದು ದೀರ್ಘಕಾಲದಿಂದ ಗುರುತಿಸಿಕೊಂಡಿದ್ದಾರೆ.
ಸೆಂಗೋಟ್ಟಯ್ಯನ್ ಸೆಪ್ಟೆಂಬರ್ 5 ರಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿದ್ದರು. ಮಾಜಿ ಮುಖ್ಯಮಂತ್ರಿ ಓ ಪನ್ನೀರ್ಸೆಲ್ವಂ, ಟಿಟಿವಿ ದಿನಕರನ್ ಮತ್ತು ವಿಕೆ ಶಶಿಕಲಾ ಸೇರಿದಂತೆ ಉಚ್ಚಾಟಿತ ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.
ಮುಂದಿನ ಚುನಾವಣೆಯಲ್ಲಿ ಪಕ್ಷ ಸೋಲುವುದನ್ನು ತಡೆಯಲು ಎಐಎಡಿಎಂಕೆ ಪಕ್ಷಕ್ಕೆ ಎಲ್ಲಾ ಉಚ್ಚಾಟಿತ ನಾಯಕರನ್ನು ಮರಳಿ ಕರೆತರುವುದು ಅತ್ಯಗತ್ಯ ಎಂದು ಅವರು ಹೇಳಿದ್ದರು. ಆದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡ ಎಐಎಡಿಎಂಕೆ, ಅವರನ್ನು ತಕ್ಷಣವೇ ಪಕ್ಷದ ಹುದ್ದೆಗಳಿಂದ ತೆಗೆದುಹಾಕಲಾಯಿತು.
ಅಕ್ಟೋಬರ್ 30 ರಂದು ನಡೆದ ತೇವರ್ ಜಯಂತಿಯಲ್ಲಿ ಅವರು ಭಾಗವಹಿಸಿದ್ದರು. ಅಲ್ಲಿ ಅವರು ಪನ್ನೀರ್‌ಸೆಲ್ವಂ ಮತ್ತು ದಿನಕರನ್ ಅವರೊಂದಿಗೆ ಬಹಿರಂಗವಾಗಿ ಕೈಜೋಡಿಸಿದರು. ಹೀಗಾಗಿ ಮರುದಿನವೇ ಅವರನ್ನು ಎಐಎಡಿಎಂಕೆಯಿಂದ ಉಚ್ಚಾಟಿಸಲಾಯಿತು.
"ಪಳನಿಸ್ವಾಮಿ ಅವರನ್ನು ಎದುರಿಸಲು ನಮ್ಮ ನಾಯಕರು ಟಿವಿಕೆ ಸೇರಿದರೆ ನಾವು ಅದನ್ನು ಸ್ವಾಗತಿಸುತ್ತೇವೆ" ಎಂದು ಸೆಂಗೊಟ್ಟೈಯನ್ ಅವರ ಆಪ್ತರು ಹೇಳಿದ್ದಾರೆ.