ನವದೆಹಲಿ: ಹರ್ಯಾಣದಲ್ಲಿ ನೋಂದಣಿಯಾದ ಕಾರು ಒಂದರ ನೋಂದಣಿ ಸಂಖ್ಯೆ ಇದೀಗ ದಾಖಲೆ ನಿರ್ಮಿಸಿದ್ದು, ದೇಶದ ಅತ್ಯಂತ ದುಬಾರಿ ನೋಂದಣಿ ಸಂಖ್ಯೆ ಎಂಬ ಕೀರ್ತಿಗೆ ಭಾಜನವಾಗಿದೆ.
ಪ್ರತೀಯೊಬ್ಬ ಕಾರು ಮಾಲೀಕರು ತಮ್ಮ ಕಾರಿನ ನೋಂದಣಿ ಸಂಖ್ಯೆ ವಿಶೇಷವಾಗಿರಬೇಕು ಎಂದು ಭಾವಿಸುತ್ತಾರೆ. ಅದರಲ್ಲೂ ಕೆಲ ಕಾರು ಮಾಲೀಕರು ತಮ್ಮ ಕಾರಿನ ಸಂಖ್ಯೆಯನ್ನೇ ಪ್ರತಿಷ್ಛೆಯನ್ನಾಗಿ ಸ್ವೀಕರಿಸಿ ಫ್ಯಾನ್ಸಿ ನಂಬರ್ ಗಳಿಗಾಗಿ ಕೋಟಿ ಕೋಟಿ ಹಣ ವ್ಯಯಿಸುತ್ತಾರೆ.
ಇದೀಗ ಈ ಪಟ್ಟಿಗೆ ಮತ್ತೊಂದು ಸಂಖ್ಯೆ ಸೇರ್ಪಡೆಯಾಗಿದ್ದು, ಹರ್ಯಾಣದ ಈ ಸಂಖ್ಯೆ ಬರೊಬ್ಬರಿ 1.17 ಕೋಟಿ ರೂಗೆ ಮಾರಾಟವಾಗಿದೆ.
ಹೌದು.. ಹರಿಯಾಣದಲ್ಲಿ ವಾರಕ್ಕೊಮ್ಮೆ ವಿಐಪಿ ಅಥವಾ ಫ್ಯಾನ್ಸಿ ನಂಬರ್ ಪ್ಲೇಟ್‌ಗಳಿಗಾಗಿ ಆನ್‌ಲೈನ್ ಹರಾಜು ನಡೆಯುತ್ತದೆ. ಅದರಂತೆ ಬಿಡ್ಡರ್‌ಗಳು ತಮ್ಮ ಆಯ್ಕೆಯ ಸಂಖ್ಯೆಗೆ ಅರ್ಜಿ ಸಲ್ಲಿಸುತ್ತಾರೆ. ಹೆಚ್ಚು ಹಣ ಬಿಡ್ ಮಾಡುವವರಿಗೆ ಈ ನಂಬರ್ ನೀಡಲಾಗುತ್ತದೆ.
ಇದೀಗ 'HR88B8888' ನಂಬರ್ ಪ್ಲೇಟ್ ಬುಧವಾರ ಹರಿಯಾಣದಲ್ಲಿ 1.17 ಕೋಟಿ ರೂ.ಗೆ ಮಾರಾಟವಾಗಿದ್ದು, ಆ ಮೂಲಕ ಇದು ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ ಎಂಬ ಕೀರ್ತಿಗೆ ಭಾಜನವಾಗಿದೆ.
ಈ ವಾರ, ಬಿಡ್ಡಿಂಗ್‌ಗಾಗಿ ಎಲ್ಲಾ ಸಂಖ್ಯೆಗಳಲ್ಲಿ, 'HR88B8888' ನೋಂದಣಿ ಸಂಖ್ಯೆಯು ಅತಿ ಹೆಚ್ಚು ಅಂದರೆ 45 ಅರ್ಜಿಗಳನ್ನು ಸ್ವೀಕರಿಸಿತ್ತು. ಸಂಖ್ಯೆಯ ಮೂಲ ಬಿಡ್ಡಿಂಗ್ ಬೆಲೆಯನ್ನು 50,000 ರೂ. ಎಂದು ನಿಗದಿಪಡಿಸಲಾಯಿತು. ಇದು ಪ್ರತಿ ನಿಮಿಷ ಕಳೆದಂತೆ ಹೆಚ್ಚುತ್ತಲೇ ಇತ್ತು, ಮಧ್ಯಾಹ್ನ 12 ಗಂಟೆಗೆ, ಬಿಡ್ಡಿಂಗ್ ಬೆಲೆ 88 ಲಕ್ಷ ರೂ.ಗಳಾಗಿತ್ತು. ನಂತರ ಸಂಜೆ 5 ಗಂಟೆಗೆ 1.17 ಕೋಟಿ ರೂ.ಗೆ ಇತ್ಯರ್ಥವಾಗಿ ಮಾರಾಟವಾಯಿತು.
ಕಳೆದ ವಾರ, 'HR22W222' ನೋಂದಣಿ ಸಂಖ್ಯೆ 37.91 ಲಕ್ಷ ರೂ.ಗಳಿಗೆ ಮಾರಾಟವಾಗಿತ್ತು.
ಏನಿದು ಹರಾಜು ಪ್ರಕ್ರಿಯೆ?
ಶುಕ್ರವಾರ ಸಂಜೆ 5 ರಿಂದ ಸೋಮವಾರ ಬೆಳಿಗ್ಗೆ 9 ರವರೆಗೆ, ಬಿಡ್ಡರ್‌ಗಳು ತಮ್ಮ ಆಯ್ಕೆಯ ಸಂಖ್ಯೆಗೆ ಅರ್ಜಿ ಸಲ್ಲಿಸಬಹುದಾಗಿತ್ತು. ನಂತರ ಬುಧವಾರ ಸಂಜೆ 5 ರಂದು ಫಲಿತಾಂಶಗಳನ್ನು ಪ್ರಕಟಿಸುವವರೆಗೆ ಬಿಡ್ಡಿಂಗ್ ಆಟ ಪ್ರಾರಂಭವಾಗುತ್ತದೆ. ಅಧಿಕೃತ fancy.parivahan.gov.in ಪೋರ್ಟಲ್‌ನಲ್ಲಿ ಹರಾಜು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುತ್ತದೆ.
HR88B8888 ಎಂದರೆ ಏನು?
HR88B8888 ಎಂಬುದು ಬಿಡ್ಡಿಂಗ್ ಮೂಲಕ ಪ್ರೀಮಿಯಂನಲ್ಲಿ ಖರೀದಿಸಿದ ವಿಶಿಷ್ಟ ವಾಹನ ಸಂಖ್ಯೆ ಅಥವಾ VIP ಸಂಖ್ಯೆಯಾಗಿದೆ. ಇದರಲ್ಲಿ HR ಎಂಬುದು ಹರ್ಯಾಣ ರಾಜ್ಯ ಸಂಕೇತವಾಗಿದ್ದು, ವಾಹನವು ಹರಿಯಾಣದಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. 88 ವಾಹನವನ್ನು ನೋಂದಾಯಿಸಲಾದ ಹರಿಯಾಣದ ನಿರ್ದಿಷ್ಟ ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಥವಾ ಜಿಲ್ಲೆಯನ್ನು ಪ್ರತಿನಿಧಿಸುತ್ತದೆ. ಬಳಿಕ ನಿರ್ದಿಷ್ಟ RTO ಒಳಗೆ ವಾಹನ ಸರಣಿ ಕೋಡ್ ಅನ್ನು ಸೂಚಿಸಲು B ಅನ್ನು ಬಳಸಲಾಗುತ್ತದೆ.
8888 ಎಂಬುದು ವಾಹನಕ್ಕೆ ನಿಯೋಜಿಸಲಾದ ವಿಶಿಷ್ಟ, ನಾಲ್ಕು-ಅಂಕಿಯ ನೋಂದಣಿ ಸಂಖ್ಯೆಯಾಗಿದೆ. ಸಂಖ್ಯೆ ಫಲಕವನ್ನು ವಿಶೇಷವಾಗಿಸುವ ಅಂಶವೆಂದರೆ ಅದು ಎಂಟುಗಳ ಸ್ಟ್ರಿಂಗ್‌ನಂತೆ ಕಾಣುತ್ತದೆ. ದೊಡ್ಡಕ್ಷರದಲ್ಲಿ 'B' ಅನ್ನು 8ನ್ನು ಹೋಲುತ್ತದೆ ಮತ್ತು ಕೇವಲ ಒಂದು ಅಂಕೆ ಮಾತ್ರ ಪುನರಾವರ್ತನೆಯಾಗುತ್ತದೆ.
ಕೇರಳದಲ್ಲೂ ದಾಖಲೆ ಬೆಲೆಗೆ ಮಾರಾಟವಾಗಿದ್ದ ಸಂಖ್ಯೆ
ಈ ವರ್ಷದ ಆರಂಭದಲ್ಲಿ, ಏಪ್ರಿಲ್‌ನಲ್ಲಿ, ಕೇರಳದ ಟೆಕ್ ಬಿಲಿಯನೇರ್ ವೇಣು ಗೋಪಾಲಕೃಷ್ಣನ್ ತಮ್ಮ ಲ್ಯಾಂಬೋರ್ಘಿನಿ ಉರುಸ್ ಪರ್ಫಾರ್ಮೆಂಟ್ ಕಾರಿಗಾಗಿ "KL 07 DG 0007" ಸಂಖ್ಯೆಯನ್ನು 45.99 ಲಕ್ಷ ರೂಪಾಯಿ ವೆಚ್ಚದಲ್ಲಿ VIP ಪರವಾನಗಿ ಪ್ಲೇಟ್ ಖರೀದಿಸಿದರು.
ಈ ಸಂಖ್ಯೆಯ ಬಿಡ್ಡಿಂಗ್ 25,000 ರೂಪಾಯಿಗಳಿಂದ ಪ್ರಾರಂಭವಾಗಿತ್ತು. ಬಳಿಕ ಸಂಖ್ಯೆಯ ಬಿಡ್ಡಿಂಗ್ ಬೆಲೆ ಗಣನೀಯವಾಗಿ ಏರಿಕೆಯಾಗಿತ್ತು. ಬಳಿಕ ಇದು ದಾಖಲೆಯ ಅಂತಿಮ ಬೆಲೆಗೆ ಮಾರಾಟವಾಯಿತು.