ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರ ಭಾವಿ ಪತಿ ಪಲಾಶ್ ಮುಚ್ಚಲ್ ಮುಂಬೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಹೌದು.. ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರನ್ನು ಕಳೆದ ಮೂರು ದಿನಗಳಿಂದ ಎದೆ ನೋವು ಮತ್ತು ಉಸಿರಾಟದ ತೊಂದರೆಯಿಂದಾಗಿ ಮುಂಬೈನ ಗೋರೆಗಾಂವ್‌ನಲ್ಲಿರುವ ಎಸ್‌ಆರ್‌ವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ ನಂತರ ಪಲಾಶ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ದೃಢಪಡಿಸಿದೆ.
ಈ ಹಿಂದೆ ವಿವಾಹಕ್ಕೆ ಕ್ಷಣಗಣನೆ ಇರುವಾಗ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಹೃದಯಾಘಾತಕ್ಕೊಳಗಾಗಿದ್ದರು, ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೇ ಸಂದರ್ಭದಲ್ಲೇ ಪಲಾಶ್ ಮುಚ್ಚಲ್ ಕೂಡ ಆಘಾತಕ್ಕೊಳಗಾಗಿದ್ದರು. ಅವರನ್ನೂ ಮುಂಬೈನ ಗೋರೆಗಾಂವ್‌ನಲ್ಲಿರುವ ಎಸ್‌ಆರ್‌ವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆಗಳ ಬಳಿಕ ಸ್ಮೃತಿ ಮಂಧಾನ ಅವರ ವಿವಾಹವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿತ್ತು.
ಇದೀಗ ಪಲಾಶ್ ಮುಚ್ಚಲ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ ಪಲಾಶ್ ಮುಚ್ಚಲ್ ಮನೆಯಲ್ಲೇ ವೈದ್ಯರ ಪರೀಕ್ಷಣೆಯಲ್ಲಿರಲಿದ್ದಾರೆ ಎಂದು ಹೇಳಲಾಗಿದೆ.
ಮದುವೆ ಭವಿಷ್ಯವೇನು?
ಇನ್ನು ಇಂದು ಬೆಳಗ್ಗೆಯಷ್ಟೇ ಸ್ಮೃತಿ ಮಂಧಾನ ಅವರ ತಂದೆ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಹೀಗಾಗಿ ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ಮದುವೆ ಕುರಿತು ಮತ್ತೆ ಸುದ್ದಿಗಳು ಹಬ್ಬಲಾರಂಭಿಸಿವೆ.
ಸ್ಥಗಿತವಾಗಿರುವ ಮದುವೆ ಕಾರ್ಯಕ್ರಮಗಳು ಯಾವಾಗ ಪುನಾರಂಭಗೊಳ್ಳಲಿವೆ ಎಂಬಿತ್ಯಾದಿ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೊಳಪಡುತ್ತಿವೆ. ಆದರೂ ಉಭಯ ಕುಟುಂಬಗಳು ಮದುವೆ ದಿನಾಂಕದ ಬಗ್ಗೆ ಯಾವುದೇ ಹೊಸ ಯೋಜನೆಗಳನ್ನು ಇನ್ನೂ ಘೋಷಿಸಿಲ್ಲ.
ಪಲಾಶ್ ಮುಚ್ಚಲ್ ಕುರಿತು ಊಹಾಪೋಹ
ಇನ್ನು ಪಲಾಶ್ ಮುಚ್ಚಲ್ ಕುರಿತು ಕೆಲ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹಬ್ಬಿದ್ದು, ಈ ವದಂತಿಗಳನ್ನು ಪಲಾಶ್ ಅವರ ತಾಯಿ ತಳ್ಳಿಹಾಕಿದ್ದಾರೆ.