ಭೋಪಾಲ್: ಕೇವಲ 15 ದಿನಗಳ ಅಂತರದಲ್ಲಿ 6 ಮಕ್ಕಳು ಕಿಡ್ನಿ ಫೇಲ್ ಆಗಿ ಸಾವನ್ನಪ್ಪಿರುವ ಧಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಈ ಬೆಚ್ಚಿಬೀಳಿಸುವ ಹೃದಯ ವಿದ್ರಾವಕ ದುರಂತ ಸಂಭವಿಸಿದ್ದು, ಕಳೆದ 15 ದಿನಗಳಲ್ಲಿ ಆರು ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಋತುಮಾನದ ಜ್ವರದ ಸಾಮಾನ್ಯ ಸಮಸ್ಯೆಗಳಂತೆ ಕಂಡುಬಂದಿದ್ದ ಈ ಘಟನೆ ಈಗ ಭೀಕರ ತಿರುವು ಪಡೆದುಕೊಂಡಿದೆ. ಮಕ್ಕಳಿಗೆ ನೀಡಿದ ಕೆಮ್ಮಿನ ಸಿರಪ್ ನ ಅಡ್ಡಪರಿಣಾಮದಿಂದಾಗಿ ಮಕ್ಕಳು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಸಾವನ್ನಪ್ಪಿದ ಮಕ್ಕಳನ್ನು ಐದು ವರ್ಷದೊಳಗಿನವರು ಎಂದು ಹೇಳಲಾಗಿದ್ದು, ಎಲ್ಲಾ ಮಕ್ಕಳು ಮೊದಲು ಶೀತ ಮತ್ತು ಸೌಮ್ಯ ಜ್ವರದ ವಿಚಾರವಾಗಿ ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಸ್ಥಳೀಯ ವೈದ್ಯರು ಕೆಮ್ಮಿನ ಸಿರಪ್‌ಗಳು ಸೇರಿದಂತೆ ನಿಯಮಿತ ಔಷಧಿಗಳನ್ನು ಸೂಚಿಸಿದರು.
ಅದನ್ನು ಸೇವಿಸಿದ ನಂತರ ಮಕ್ಕಳು ಚೇತರಿಸಿಕೊಳ್ಳುತ್ತಿರುವಂತೆ ತೋರುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ರೋಗ ಲಕ್ಷಣಗಳು ಮರಳಿದವು. ನಂತರ ಮೂತ್ರ ವಿಸರ್ಜನೆಯಲ್ಲಿ ಹಠಾತ್ ಮತ್ತು ಆತಂಕಕಾರಿ ಇಳಿಕೆ ಕಂಡುಬಂದಿತು. ಸ್ಥಿತಿಯು ಬೇಗನೆ ಹದಗೆಟ್ಟು ಮೂತ್ರಪಿಂಡದ ಸೋಂಕುಗಳಾಗಿ ಮಾರ್ಪಟ್ಟಿತು.
ಬಳಿಕ ಉನ್ನತ ಚಿಕಿತ್ಸೆಗಾಗಿ ಮಹಾರಾಷ್ಟ್ರದ ನಾಗ್ಪುರಕ್ಕೆ ಮಕ್ಕಳನ್ನು ಕರೆದೊಯ್ಯಲಾಗಿದ್ದರೂ, ಮೂವರು ಮಕ್ಕಳು ಅಲ್ಲಿಯೇ ಸಾವನ್ನಪ್ಪಿದರು. ಈ ಬಗ್ಗೆ ದುಃಖದಿಂದ ಮಾತನಾಡಿರುವ ಪೋಷಕರು, 'ನಮ್ಮ ಮಕ್ಕಳು ಹಿಂದೆಂದೂ ಅನಾರೋಗ್ಯಕ್ಕೆ ಒಳಗಾಗಿರಲಿಲ್ಲ. ಈ ಬಾರಿ ಅವರಿಗೆ ಸಣ್ಣ ಜ್ವರವಿತ್ತು. ಸಿರಪ್ ನಂತರ, ಅವರ ಮೂತ್ರ ನಿಂತುಹೋಯಿತು. ನಾವು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ' ಎಂದು ಅಳಲು ತೋಡಿಕೊಂಡಿದ್ದಾರೆ.
ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್ ಕಾರಣ
ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್ ಕಾರಣ ಎಂದು ಶಂಕಿಸಲಾಗುತ್ತಿದ್ದು, ವಿಷಕಾರಿ ಡೈಥಿಲೀನ್ ಗ್ಲೈಕೋಲ್ ಬೆರೆಸಿದ ಕಲುಷಿತ ಕೆಮ್ಮಿನ ಸಿರಪ್ ಸಾವುಗಳಿಗೆ ಕಾರಣ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಮಕ್ಕಳ ಮೂತ್ರಪಿಂಡದ ಬಯಾಪ್ಸಿ ಪರೀಕ್ಷೆಯಲ್ಲಿ ಔಷಧೀಯ ವಿಷಕ್ಕೆ ಸಂಬಂಧಿಸಿದ ವಿಷಕಾರಿ ರಾಸಾಯನಿಕವಾದ ಡೈಥಿಲೀನ್ ಗ್ಲೈಕಾಲ್ ಮಾಲಿನ್ಯ ಇರುವುದು ಬೆಳಕಿಗೆ ಬಂದಾಗ ಮಹತ್ವದ ತಿರುವು ಸಿಕ್ಕಿತು. ಹೆಚ್ಚಿನ ಸಂತ್ರಸ್ಥ ಮಕ್ಕಳಿಗೆ ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ (Coldrif and Nextro-DS) ಸಿರಪ್‌ಗಳನ್ನು ನೀಡಲಾಗಿತ್ತು.
ಶಂಕಿತ ಸಿರಪ್ ಗೆ ನಿಷೇಧ ಹೇರಿದ ಡಿಸಿ
ಇನ್ನು ಚಿಂದ್ವಾರ ಕಲೆಕ್ಟರ್ ಶೀಲೇಂದ್ರ ಸಿಂಗ್ ಅವರು ಜಿಲ್ಲೆಯಾದ್ಯಂತ ಎರಡು ಸಿರಪ್‌ಗಳ ಮಾರಾಟವನ್ನು ತಕ್ಷಣವೇ ನಿಷೇಧಿಸಿದರು ಮತ್ತು ವೈದ್ಯರು, ಔಷಧಾಲಯಗಳು ಮತ್ತು ಪೋಷಕರಿಗೆ ತುರ್ತು ಸಲಹೆಯನ್ನು ನೀಡಿದರು. "ಬಯಾಪ್ಸಿ ವರದಿಯು ಕಲುಷಿತ ಔಷಧವು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವೆಂದು ಬಲವಾಗಿ ಸೂಚಿಸುತ್ತದೆ. ಪೀಡಿತ ಹಳ್ಳಿಗಳಿಂದ ನೀರಿನ ಮಾದರಿಗಳು ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಅದರ ವರದಿಯಲ್ಲಿ ಯಾವುದೇ ಸೋಂಕನ್ನು ತೋರಿಸಿಲ್ಲ. ಆದಾಗ್ಯೂ ಔಷಧದ ಸಂಬಂಧವನ್ನು ನಿರ್ಲಕ್ಷಿಸಲಾಗುವುದಿಲ್ಲ" ಎಂದು ಸಿಂಗ್ ಹೇಳಿದರು.
ICMR ತಂಡ ದೌಡು
ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಡಳಿತವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ತಂಡವನ್ನುಪರೀಕ್ಷೆಗೆ ಕರೆದಿದೆ. ಭೋಪಾಲ್‌ನ ಆರೋಗ್ಯ ಇಲಾಖೆಯ ಇಬ್ಬರು ಸದಸ್ಯರ ತಂಡವು ಪರಾಸಿಯಾ, ನ್ಯೂಟನ್ ಚಿಕ್ಲಿ ಮತ್ತು ಹತ್ತಿರದ ಹಳ್ಳಿಗಳಿಗೆ ಆಗಮಿಸಿದೆ. ಅಧಿಕಾರಿಗಳು ಕುಟುಂಬಗಳನ್ನು ಸಂದರ್ಶಿಸುತ್ತಿದ್ದಾರೆ, ಔಷಧ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಇತರ ಪೀಡಿತ ಮಕ್ಕಳನ್ನು ಗುರುತಿಸಲು ಮನೆ-ಮನೆಗೆ ಸಮೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಮುಖ್ಯ ವೈದ್ಯಾಧಿಕಾರಿ ಡಾ. ನರೇಶ್ ಗೋನಾರೆ ಅವರು ಬಹಿರಂಗಪಡಿಸಿದಂತೆ ಮೊದಲ ಶಂಕಿತ ಪ್ರಕರಣ ಆಗಸ್ಟ್ 24 ರಂದು ವರದಿಯಾಗಿದ್ದು, ಮೊದಲ ಸಾವು ಸೆಪ್ಟೆಂಬರ್ 7 ರಂದು ಸಂಭವಿಸಿದೆ.
"ಸೆಪ್ಟೆಂಬರ್ 20 ರಿಂದ, ಮೂತ್ರ ಧಾರಣ ಮತ್ತು ಮೂತ್ರಪಿಂಡದ ತೊಂದರೆಗಳ ಹೆಚ್ಚಿನ ಪ್ರಕರಣಗಳು ಹೊರಹೊಮ್ಮಿವೆ. ಇದು ವೈರಲ್ ಸೋಂಕುಗಳಿಗೆ ಸೂಕ್ಷ್ಮ ಅವಧಿಯಾಗಿದೆ, ಆದರೆ ಹಲವಾರು ಮಕ್ಕಳಲ್ಲಿ ಹಠಾತ್ ಮೂತ್ರಪಿಂಡ ವೈಫಲ್ಯವು ಹೆಚ್ಚು ಅಪಾಯಕಾರಿ ಸಂಗತಿಯನ್ನು ಸೂಚಿಸುತ್ತದೆ" ಎಂದು ಅವರು ಹೇಳಿದರು.
ಐಸಿಎಂಆರ್ ತಂಡವು ಹೆಚ್ಚಿನ ವಿಶ್ಲೇಷಣೆಗಾಗಿ ಪುಣೆಯ ವೈರಾಲಜಿ ಸಂಸ್ಥೆಗೆ ಈಗಾಗಲೇ ರಕ್ತ ಮತ್ತು ಔಷಧ ಮಾದರಿಗಳನ್ನು ಕಳುಹಿಸಿದೆ. ಸಂತ್ರಸ್ಥ ಕುಟುಂಬಗಳು ನ್ಯಾಯ ಮತ್ತು ಉತ್ತರಗಳನ್ನು ಬಯಸುತ್ತಿರುವಾಗ, ಆಡಳಿತವು ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿದೆ.