ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಶತಮಾನೋತ್ಸವ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಇಂದು ರೂ.100 ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.
100 ರೂಪಾಯಿ ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನ, ಇನ್ನೊಂದು ಬದಿಯಲ್ಲಿ ಸಿಂಹ, ಅಭಯ ಮುದ್ರೆಯಲ್ಲಿರುವ ಭಾರತ ಮಾತೆಯ ಚಿತ್ರ ಮತ್ತು ಸ್ವಯಂಸೇವಕರು ಭಕ್ತಿಯಿಂದ ನಮಸ್ಕರಿಸುವ ಚಿತ್ರವಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಣ್ಯದಲ್ಲಿ ಭಾರತ ಮಾತೆಯ ಚಿತ್ರ ಹಾಕಲಾಗಿದೆ. ಈ ನಾಣ್ಯದ ಮೇಲೆ ಸಂಘದ ಧ್ಯೇಯವಾಕ್ಯ "ರಾಷ್ಟ್ರಾಯ ಸ್ವಾಹಾ, ಇದಂ ರಾಷ್ಟ್ರಾಯ, ಇದಂ ನ ಮಮ ಸಹ ಬರೆಯಲಾಗಿದೆ.
ಅಂದರೆ ಎಲ್ಲಾವನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತೇನೆ. ಎಲ್ಲವೂ ರಾಷ್ಟ್ರದು, ನನ್ನದು ಏನು ಇಲ್ಲ ಎಂಬುದು ಇದರ ಅರ್ಥವಾಗಿದೆ.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾದ ಬಳಿಕ ಸಂಘ ಮಹಾನ್ ಉದ್ದೇಶದೊಂದಿಗೆ ಮುನ್ನಡೆಯುತ್ತಾ ಬಂದಿದೆ. ಈ ಉದ್ದೇಶವೇ ರಾಷ್ಟ್ರ ನಿರ್ಮಾಣ! ಸಂಘದ ಸ್ವಯಂ ಸೇವಕರು ಸಾಂವಿಧಾನಿಕ ಮೌಲ್ಯಗಳ ನಂಬಿಕೆಯಿಂದ ಮಾರ್ಗದರ್ಶನ ಪಡೆದು ಸಮಾಜದೆಡೆಗೆ ಸದಾ ಕಾರ್ಯತತ್ಪರರಾಗಿದ್ದಾರೆ ಮತ್ತು ಬದ್ಧರಾಗಿದ್ದಾರೆ ಎಂದರು.
ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತನ್ನ ಛಾಪು ಮೂಡಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಲೆಕ್ಕವಿಲ್ಲದಷ್ಟು ತ್ಯಾಗಗಳನ್ನು ಮಾಡಿದೆ. ಸಂಘದ ಸ್ವಯಂಸೇವಕರು ಶಿಕ್ಷಣ, ಆರೋಗ್ಯ, ವಿಪತ್ತು ನಿರ್ವಹಣೆಯಲ್ಲಿ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.