ಕೊಲಂಬಿಯಾ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕತೆಯ ಹೃದಯಭಾಗದಲ್ಲಿ ಹೇಡಿತನವಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು 2023 ರಲ್ಲಿ ಚೀನಾ ಕುರಿತು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಗಾಂಧಿ, ದುರ್ಬಲರನನು ಸೋಲಿಸುವುದು ಮತ್ತು ಅವರಿಗಿಂತ ಬಲಶಾಲಿಗಳಿಂದ ಓಡಿಹೋಗುವುದು ಆರ್ ಎಸ್ ಎಸ್ ಸಿದ್ಧಾಂತವಾಗಿದೆ ಎಂದು ಟೀಕಿಸಿದ್ದಾರೆ.
ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಇದು ಬಿಜೆಪಿ-ಆರ್‌ಎಸ್‌ಎಸ್ ಸ್ವಭಾವ. ವಿದೇಶಾಂಗ ಸಚಿವರ ಹೇಳಿಕೆಯನ್ನು ಗಮನಿಸಿದರೆ, 'ಚೀನಾ ನಮಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಅವರೊಂದಿಗೆ ಹೇಗೆ ಹೋರಾಟ ಆಯ್ಕೆ ಮಾಡಿಕೊಳ್ಳೋದು? ಎಂದು ಕೇಳುವಂತಿದೆ. ಅವರ ಸೈದ್ಧಾಂತಿಕತೆಯ ಹೃದಯಭಾಗದಲ್ಲಿ ಹೇಡಿತನವಿದೆ' ಎಂದರು.
ವಿನಾಯಕ್ ದಾಮೋದರ್ ಸಾವರ್ಕರ್ ತಮ್ಮ ಪುಸ್ತಕದಲ್ಲಿ ಬರೆದಿರುವ ಘಟನೆಯೊಂದನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಸಾರ್ವಕರ್ ಹಾಗೂ ಅವರ ಸ್ನೇಹಿತರು ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹೊಡೆದು ಖುಷಿಪಟ್ಟಿದ್ದರಂತೆ. ಒಬ್ಬ ವ್ಯಕ್ತಿಯನ್ನು ಐದು ಜನರು ಹೊಡೆದು ಅವರಲ್ಲಿ ಒಬ್ಬನನ್ನು ಸಂತೋಷಪಡಿಸಿದರೆ ಅದು ಹೇಡಿತನ. ದುರ್ಬಲರನ್ನು ಹೊಡೆದು ದುರ್ಬಲಗೊಳಿಸುವುದು ಆರ್ ಎಸ್ ಎಸ್ ಸಿದ್ಧಾಂತವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.