ನವದೆಹಲಿ: ಎಲೆಕ್ಟ್ರಿಕ್ ಬಸ್ಸಿನ ಮಾರ್ಗದ ಬಗ್ಗೆ ಜಗಳವಾಡಿ, ಕಂಡಕ್ಟರ್ ಬೆರಳನ್ನು ಕಚ್ಚಿದ ಆರೋಪದ ಮೇಲೆ ಡಿಟಿಸಿ ಬಸ್ ಮಾರ್ಷಲ್ ಒಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸೆಪ್ಟೆಂಬರ್ 28ರ ಸಂಜೆ ಮುನಿರ್ಕಾ ನಿವಾಸಿ ಕಂಡಕ್ಟರ್ ಜಿತೇಂದರ್ ಕುಮಾರ್ ಪುನಿಯಾ(34) ಅವರು ನೋಯ್ಡಾದ ಸೆಕ್ಟರ್ 62 ಮತ್ತು ಧೌಲಾ ಕುವಾನ್ ನಡುವೆ ಚಲಿಸುವ ಬಸ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ.
ಪುನಿಯಾ 2019 ರಿಂದ ಗುತ್ತಿಗೆ ಆಧಾರದ ಮೇಲೆ ಡಿಟಿಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಬಂಧಿತ ಆರೋಪಿ ಮಾರ್ಷಲ್ ಮಾನ್ಸಿಂಗ್ ಎಂದು ಗುರುತಿಸಲಾಗಿದ್ದು, ಇಬ್ಬರ ನಡುವೆ ಜಗಳವಾದ ನಂತರ ಕಂಡಕ್ಟರ್ ಬೆರಳನ್ನು ಕಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
"ಬಸ್ ಚಾಲಕ ಮತ್ತು ಮಾರ್ಷಲ್ ಎಲೆಕ್ಟ್ರಿಕ್ ಬಸ್ ಅನ್ನು ಲಜ್‌ಪತ್ ನಗರ ರಿಂಗ್ ರಸ್ತೆ ಫ್ಲೈಓವರ್ ಮೂಲಕ ತೆಗೆದುಕೊಳ್ಳಲು ಬಯಸಿದ್ದರು. ಆದರೆ ಕಂಡಕ್ಟರ್ ಜಿತೇಂದರ್ ಅವರು, ಅದರ ಬದಲಿಗೆ ಸಮಾನಾಂತರ ರಸ್ತೆಯನ್ನು ತೆಗೆದುಕೊಳ್ಳಲು ಒತ್ತಾಯಿಸಿದರು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.