ಗುವಾಹಟಿ: ಜುಬೀನ್ ಗರ್ಗ್ ಅವರ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿಂಗಾಪುರದಲ್ಲಿ ಅವರಿಗೆ ವಿಷ ನೀಡಲಾಗಿದೆ ಎಂದು ಅವರ ಬ್ಯಾಂಡ್ ಮೇಟ್ ಶೇಖರ್ ಜ್ಯೋತಿ ಗೋಸ್ವಾಮಿ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.
ಸಿಂಗಾಪುರದಲ್ಲಿ ಅವರ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಮತ್ತು ಕಾರ್ಯಕ್ರಮ ಆಯೋಜಕ ಶ್ಯಾಮಕಾನು ಮಹಂತ ಅವರು ಗರ್ಗ್ ಅವರಿಗೆ ವಿಷ ನೀಡಿದ್ದಾರೆ ಎಂದು ಬಂಧಿತ ಆರೋಪಿ ಪೊಲೀಸರಿಗೆ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಪ್ರಕರಣದಲ್ಲಿ ಕಾರ್ಯಕ್ರಮದ ಆಯೋಜಕ ಮತ್ತು ಇಬ್ಬರು ಬ್ಯಾಂಡ್ ಸದಸ್ಯರಾದ ಗೋಸ್ವಾಮಿ ಮತ್ತು ಅಮೃತಪ್ರಭ ಮಹಂತ ಅವರನ್ನು ಬಂಧಿಸಿ 14 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಗರ್ಗ್ ಅವರು ಸಿಂಗಾಪುರದಲ್ಲಿ ಸಮುದ್ರದಲ್ಲಿ ಈಜುತ್ತಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದರು. ಶ್ಯಾಮಕಾನು ಮಹಾಂತ ಮತ್ತು ಅವರ ಕಂಪನಿಯು ಆಯೋಜಿಸಿದ್ದ ಈಶಾನ್ಯ ಭಾರತ ಉತ್ಸವದ 4 ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಅವರು ಆಗ್ನೇಯ ಏಷ್ಯಾದ ರಾಷ್ಟ್ರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿತ್ತು.
ಜುಬೀನ್ ಗರ್ಗ್ ಅವರು ಉಸಿರಾಡಲು ಏದುಸಿರು ಬಿಡುತ್ತಿರುವಾಗ, ಬಹುತೇಕ ಮುಳುಗುತ್ತಿರುವಾಗ, 'ಜಬೋ ದೇ, ಜಬೋ ದೇ' (ಅವರನ್ನು ಹೋಗಲಿ, ಹೋಗಲಿ) ಎಂದು ಸಿದ್ಧಾರ್ಥ್ ಶರ್ಮಾ ಕೂಗುವುದು ಕೇಳಿಸಿತ್ತು. ಜುಬೀನ್ ಗರ್ಗ್ ಅವರಿಗೆ ಈಜು ಬರುತಿತ್ತು. ಹೀಗಾಗಿ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿಲ್ಲ ಎಂದು ಸಾಕ್ಷಿದಾರರು ಹೇಳಿದ್ದರು. ಶರ್ಮಾ ಮತ್ತು ಶ್ಯಾಮಕಾನು ಮಹಂತ ಅವರು ವಿಷಪ್ರಾಶನ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ತಮ್ಮ ಪಿತೂರಿ ನಡೆಸಲು ಸಿಂಗಾಪುರ ಆಯ್ಕೆ ಮಾಡಿದ್ದಾರೆ ಎಂದು ಗೋ ಸ್ವಾಮಿ ಆರೋಪಿಸಿದ್ದಾರೆ.
CID ಯ ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡ (SIT) ಪ್ರಸ್ತುತ ಸಿಂಗಾಪುರದಲ್ಲಿ ಗರ್ಗ್ ಸಾವಿನ ತನಿಖೆ ನಡೆಸುತ್ತಿದೆ. ಅಸ್ಸಾಂ ಸರ್ಕಾರವು ಪ್ರಕರಣದ ತನಿಖೆಗಾಗಿ ಏಕ ಸದಸ್ಯದ ನ್ಯಾಯಾಂಗ ಆಯೋಗವನ್ನು ಸ್ಥಾಪಿಸಿದೆ. ರಿಮಾಂಡ್ ನೋಟಿನ ಸತ್ಯಾಸತ್ಯತೆಯನ್ನು ಸಿಐಡಿ ಮೂಲಗಳು ಖಚಿತಪಡಿಸಿವೆ. ಶ್ಯಾಮಕಾನು ಮಹಂತ ಅವರು ಪ್ರಸ್ತುತ ಅಸ್ಸಾಂ ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿರುವ ಮಾಜಿ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ ಅವರ ಕಿರಿಯ ಸಹೋದರರಾಗಿದ್ದಾರೆ.
ಕಾರ್ಯಕ್ರಮ ಆಯೋಜಕರ ಇನ್ನೊಬ್ಬ ಸಹೋದರ ನಾನಿ ಗೋಪಾಲ್ ಮಹಂತ, ಅವರು ಗೌಹಾಟಿ ವಿಶ್ವವಿದ್ಯಾಲಯದ ಉಪಕುಲಪತಿಯಾಗುವ ಮೊದಲು ಸಿಎಂಗೆ ಶಿಕ್ಷಣ ಸಲಹೆಗಾರರಾಗಿದ್ದರು. ಪ್ರತ್ಯಕ್ಷದರ್ಶಿಯಾಗಿರುವ ಶೇಖರ್ ಜ್ಯೋತಿ ಗೋಸ್ವಾಮಿ ಅವರ ಹೇಳಿಕೆಯು ಜುಬೀನ್ ಗರ್ಗ್ ಅವರ ಸಾವನ್ನು ಆಕಸ್ಮಿಕ ಎಂದು ಬಿಂಬಿಸಲು ಸಂಚು ರೂಪಿಸಲಾಗಿದೆ ಎಂದು ಬಹಿರಂಗಪಡಿಸಿದೆ. ಸಿಂಗಾಪುರದಲ್ಲಿ ತಮ್ಮೊಂದಿಗೆ ಉಳಿದುಕೊಂಡಿದ್ದ ಸಿದ್ಧಾರ್ಥ್ ಶರ್ಮಾ ಅವರು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.