ನವದೆಹಲಿ: ಬಿಹಾರದಲ್ಲಿ ಎಸ್‌ಐಆರ್ ಅಡಿಯಲ್ಲಿ ಸುಮಾರು 23 ಲಕ್ಷ ಮಹಿಳೆಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದ್ದು, ಅವರಲ್ಲಿ ಹೆಚ್ಚಿನವರು 2020ರ ಚುನಾವಣೆಯಲ್ಲಿ "ತೀವ್ರ ಸ್ಪರ್ಧೆ" ಕಂಡ 59 ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದಾರೆ ಎಂದು ಹೇಳಿದೆ.
ತನ್ನ "ಮತ ಚೋರಿ" ಆರೋಪವನ್ನು ಪುನರುಚ್ಚರಿಸಿದ ಕಾಂಗ್ರೆಸ್, ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಸಮಯದಲ್ಲಿ "ಯೋಜಿತ ಪಿತೂರಿಯ" ಭಾಗವಾಗಿ ಪಟ್ಟಿಯಿಂದ ದಲಿತ ಮತ್ತು ಮುಸ್ಲಿಂ ಮಹಿಳಾ ಮತದಾರರನ್ನು "ಕೈಬಿಟ್ಟಿದೆ" ಎಂದು ಆರೋಪಿಸಿದೆ.
ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಈ ಮಹಿಳೆಯರು ಮತ ಚಲಾಯಿಸಿದಾಗ, ಈ ಮತಗಳು "ಮೋಸದ" ಮತ್ತು "ನಕಲಿ ಮತಗಳಾಗಿದ್ದರೆ", ಅವರಿಂದ ಆಯ್ಕೆಯಾದ ಸಂಸದರು ಸರ್ಕಾರ ರಚಿಸಲು ಸಹಾಯ ಮಾಡಿದ್ದಾರೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇಂದಿರಾ ಭವನದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ, "ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ" ಚುನಾವಣಾ ಆಯೋಗವು ಬಿಹಾರದಲ್ಲಿ ಎಸ್‌ಐಆರ್ ಹೆಸರಿನಲ್ಲಿ "ಭಾರಿ ವಂಚನೆ" ಮಾಡುತ್ತಿದೆ ಎಂದು ಆರೋಪಿಸಿದರು.
"ಬಿಹಾರದಲ್ಲಿ ಸುಮಾರು 3.5 ಕೋಟಿ ಮಹಿಳಾ ಮತದಾರರಿದ್ದಾರೆ. ಆದರೆ ಸುಮಾರು 23 ಲಕ್ಷ ಮಹಿಳೆಯರ (22.7 ಲಕ್ಷ) ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ" ಎಂದು ಅವರು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಮಹಿಳೆಯರು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಮತ್ತು "ಈ ನಿರ್ಧಾರ ಸಂವಿಧಾನಕ್ಕೆ ವಿರುದ್ಧವಾಗಿದೆ" ಎಂದು ಲಂಬಾ ವಾಗ್ದಾಳಿ ನಡೆಸಿದರು.