ಕೊಕ್ರಝಾರ್: ಸಿಂಗಾಪುರದಲ್ಲಿ ಗಾಯಕ ಜುಬೀನ್ ಗಾರ್ಗ್ ಅವರ ಜತೆ ಕೊನೆ ಕ್ಷಣದಲ್ಲಿ ದೋಣಿಯಲ್ಲಿದ್ದ ವ್ಯಕ್ತಿಗಳ ವಾಪಸಾತಿ 'ಸಂಪೂರ್ಣವಾಗಿ ಅವರ ಮೇಲೆ ಅವಲಂಬಿತವಾಗಿದೆ'. ಆದರೆ ಅವರು ಅಕ್ಟೋಬರ್ 6 ರ ಗಡುವಿನೊಳಗೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಂದೆ ಹಾಜರಾಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಹೇಳಿದ್ದಾರೆ.
ಇಂದು ಕೊಕ್ರಝಾರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಸ್ಸಾಂ ಸಿಎಂ, "ಅವರ ವಾಪಸಾತಿ ಸಂಪೂರ್ಣವಾಗಿ ಅವರ ಮೇಲೆ ಅವಲಂಬಿತವಾಗಿರುತ್ತದೆ. ಅಸ್ಸಾಂ ಸರ್ಕಾರ ಅವರನ್ನು ಸಿಂಗಾಪುರದಿಂದ ಕರೆತರಲು ಸಾಧ್ಯವಿಲ್ಲ. ಆದರೆ ತನಿಖೆಗೆ ಮರಳುವಂತೆ ಕೇಳಿಕೊಳ್ಳಲು ನಾವು ಅವರ ಪೋಷಕರೊಂದಿಗೆ ಮಾತನಾಡಬಹುದು" ಎಂದಿದ್ದಾರೆ.
ಜುಬೀನ್ ಅವರು ಸಮುದ್ರದಲ್ಲಿ ಈಜುವಾಗ ಸಾವನ್ನಪ್ಪಿದ್ದು, ಅವರ ಕೊನೆಯ ಕ್ಷಣಗಳಲ್ಲಿ ಅವರೊಂದಿಗಿದ್ದ ಎಲ್ಲರಿಗೂ ಅಕ್ಟೋಬರ್ 6ರೊಳಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಅವರು ಹೇಳಿದರು.
"ಅವರು ಸೋಮವಾರದೊಳಗೆ ಹಿಂತಿರುಗದಿದ್ದರೆ, ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು ಅವರನ್ನು ನಿರ್ದಿಷ್ಟ ಪ್ರಕ್ರಿಯೆಯ ಮೂಲಕ ಮರಳಿ ಕರೆತರಬೇಕಾಗುತ್ತದೆ" ಎಂದು ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ವಿಹಾರ ನೌಕೆಯಲ್ಲಿ ಗಾಯಕನ ಜೊತೆಗಿದ್ದ ಜನ, ತನಿಖಾ ಸಂಸ್ಥೆಯ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸದ ಹೊರತು ವಿಚಾರಣೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಈ ಹಿಂದೆ ಹೇಳಿದ್ದರು.
ಏತನ್ಮಧ್ಯೆ, ಗಾರ್ಗ್ ಸಾವಿನಲ್ಲಿ ಅಸ್ಸಾಂ ಅಸೋಸಿಯೇಷನ್ ಆಫ್ ಸಿಂಗಾಪುರದ 11 ಸದಸ್ಯರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ವೈದ್ಯರೊಬ್ಬರು ಲತಾಸಿಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.