ಭೂಪಾಲ್: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತ ಎಂಬ ಮನೆಯೊಳಗಿನ ಕೋಣೆ ಇದ್ದಂತೆ, ಆದರೆ ಅಪರಿಚಿತರು ಒಳಗೆ ಬಂದಿದ್ದಾರೆ. ಆ ಕೊಠಡಿ ಮರುವಶ ಮಾಡಿಕೊಳ್ಳಬೇಕು' ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಭಾನುವಾರ ಕರೆ ನೀಡಿದ್ದಾರೆ.
ಮಧ್ಯ ಪ್ರದೇಶದ ಸತ್ನಾದಲ್ಲಿ ಸಿಂಧಿ ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು, 'ಇಡೀ ಭಾರತ ಒಂದೇ ಮನೆ, ಆದರೆ ಯಾರೋ ನಮ್ಮ ಮನೆಯ ಒಂದು ಕೋಣೆಯನ್ನು ಮನೆಯಿಂದ ಬೇರ್ಪಡಿಸಿದ್ದಾರೆ. ಅಲ್ಲಿ ನನ್ನ ಮೇಜು, ಕುರ್ಚಿ ಮತ್ತು ಬಟ್ಟೆಗಳನ್ನು ಇಡಲಾಗುತ್ತಿತ್ತು. ಅವರು (ಪಾಕ್) ಅದನ್ನು ಆಕ್ರಮಿಸಿಕೊಂಡಿದ್ದಾರೆ. ನಾಳೆ, ನಾನು ಅದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು' ಎಂದು ಕರತಾಡನದ ಮಧ್ಯೆ ಹೇಳಿದರು.
'ಸಭೆಯಲ್ಲಿ ಅನೇಕ ಸಿಂಧಿ ಸಹೋದರರು ಕುಳಿತಿದ್ದಾರೆ. ನನಗೆ ತುಂಬಾ ಸಂತಸವಾಗಿದೆ. ಅವರು ಪಾಕ್ ಗೆ ಹೋಗಲಿಲ್ಲ. ಅವಿಭಜಿತ ಭಾರತಕ್ಕೆ ಬಂದರು. ಪರಿಸ್ಥಿತಿ ವೈಪರಿತ್ಯದ ಕಾರಣ ಅವರು ಈ ಮನೆಗೆ ಆಗಮಿಸಿದರು. ಏಕೆಂದರೆ ಇದೂ ಅವರದ್ದೇ ಮನೆ' ಎಂದು ನುಡಿದರು.
ಈ ಮನೆ ಬೇರೆಯಲ್ಲದ ಕಾರಣ ಸಂದರ್ಭಗಳು ನಮ್ಮನ್ನು ಆ ಮನೆಯಿಂದ ಇಲ್ಲಿಗೆ ಕಳುಹಿಸಿವೆ," ಎಂದು ಅವರು ಹೇಳಿದಾಗ ಸಭಿಕರಿಂದ ದೊಡ್ಡ ಕರತಾಡನ ವ್ಯಕ್ತವಾಯಿತು. ಪಾಕಿಸ್ತಾನದ ಆಡಳಿತದ ವಿರುದ್ಧ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸುತ್ತಿರುವುದರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉದ್ವಿಗ್ನತೆಯ ಮಧ್ಯೆ ಮೋಹನ್ ಭಾಗವತ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.