ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿಯು ಮಂಗಳವಾರ ಹಿರಿಯ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದೆ.
ಪ್ರಸ್ತುತ ದೇವಸ್ವಂ ಉಪ ಆಯುಕ್ತರಾಗಿ(ಹರಿಪಾಡ್) ಕಾರ್ಯ ನಿರ್ವಹಿಸುತ್ತಿರುವ ಬಿ ಮುರಾರಿ ಬಾಬು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಟಿಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ದೇವಾಲಯದಲ್ಲಿ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಬಾಬು, ಜುಲೈ 17, 2019 ರಂದು ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ಸಲ್ಲಿಸುವ ಮೂಲಕ "ಗಂಭೀರ ಲೋಪ" ಎಸಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇವಾಲಯದ ಪ್ರವೇಶದ್ವಾರದ ಎರಡೂ ಬದಿಗಳಲ್ಲಿ ಕಂಡುಬಂದಿರುವ ಚಿನ್ನ ಲೇಪಿತ ದ್ವಾರಪಾಲಕ ವಿಗ್ರಹಗಳನ್ನು ತಾಮ್ರ ಲೇಪಿತ ಎಂದು ವರದಿಯಲ್ಲಿ ತಪ್ಪಾಗಿ ಹೆಸರಿಸಿದ್ದಾರೆ.
ಆಲಪ್ಪುಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬು, ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು, ಟಿಡಿಬಿ ಇನ್ನೂ ತಮ್ಮಿಂದ ಯಾವುದೇ ವಿವರಣೆಯನ್ನು ಕೇಳಿಲ್ಲ ಎಂದು ಹೇಳಿದ್ದಾರೆ.
“ಗರ್ಭಗುಡಿಯ ಬಾಗಿಲಿನ ಎರಡೂ ಬದಿಯಲ್ಲಿರುವ ‘ದ್ವಾರಪಾಲಕ’ ವಿಗ್ರಹಗಳಿಗೆ ತೆಳುವಾದ ಚಿನ್ನದ ಲೇಪನವನ್ನು ಮಾತ್ರ ಹಾಕಲಾಗಿತ್ತು. 1998ರಲ್ಲಿ ಕೈಗಾರಿಕೋದ್ಯಮಿ ವಿಜಯ್ ಮಲ್ಯ ಅವರ ಪ್ರಾಯೋಜಕತ್ವದಲ್ಲಿ ಗರ್ಭಗುಡಿಗೆ ಚಿನ್ನ ಲೇಪಿಸಲಾಗಿತ್ತು. ಅದು ಸವೆದುಹೋಗಿ ಬರೀ ತಾಮ್ರದ ತಟ್ಟೆ ಮಾತ್ರ ಉಳಿದಿತ್ತು. ಮೂಲ ಲೋಹ ತಾಮ್ರವಾಗಿರುವ ಕಾರಣದಿಂದಾಗಿ ತಾಮ್ರವೆಂದೇ ಉಲ್ಲೇಖಿಸಲಾಗಿದೆ” ಎಂದು ಬಾಬು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.