ಜಬಲ್ಪರ: ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿರುವಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಅದರಲ್ಲೂ ತನ್ನ ವಿಶಿಷ್ಟ ಕಂಠದ ಮೂಲಕ ದೇಶಾದ್ಯಂತ ಗುರುತಿಸಿಕೊಂಡಿರುವ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚಿಗೆ ಮೈಥಿಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಿಹಾರ ಸಂಘಟನಾ ಉಸ್ತುವಾರಿ ವಿನೋದ್ ತಾವ್ದೆ ಮತ್ತು ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರನ್ನು ಭೇಟಿಯಾಗಿದ್ದರು.
25 ವರ್ಷದ ಮೈಥಿಲಿ ಠಾಕೂರ್ ಹಲವು ಸಂಗೀತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 2024ರಲ್ಲಿ ಪ್ರಧಾನ ನರೇಂದ್ರ ಮೋದಿ ಅವರಿಂದ ನ್ಯಾಷನಲ್ ಕ್ರಿಯೆಟರ್ ಪ್ರಶಸ್ತಿ ಪಡೆದುಕೊಂಡಿದ್ದರು.
ಈ ಕುರಿತು ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ಮೈಥಿಲಿ ಠಾಕೂರ್ ತಮ್ಮ ಹುಟ್ಟೂರು ಮಧುಬನಿ ಜಿಲ್ಲೆಯ ಬೇಣಿಪಟ್ಟಿಯಿಂದ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.