ಬೆಂಗಳೂರು: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಬಗ್ಗೆ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಮತ್ತು ಬಿಜೆಪಿ ನಾಯಕ ಭಾಸ್ಕರ್ ರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವರ ಪೋಸ್ಟ್‌ಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ಭಾಸ್ಕರ್ ರಾವ್ ಕ್ಷಮೆಯಾಚಿಸಿದ್ದಾರೆ. "ಇದು ಕಾನೂನಾತ್ಮಕವಾಗಿ ತುಂಬಾ ತಪ್ಪಾಗಿದ್ದರೂ ಸಹ, ಪರಿಣಾಮಗಳನ್ನು ಲೆಕ್ಕಿಸದೆ ನಿಮ್ಮ ವಯಸ್ಸಿನಲ್ಲಿ, ನಿಲುವು ತೆಗೆದುಕೊಂಡು ಅದಕ್ಕೆ ಬದ್ಧತೆಯಿಂದ ಬದುಕುವ ನಿಮ್ಮ ಧೈರ್ಯವನ್ನು ನಾನು ಮೆಚ್ಚುತ್ತೇನೆ" ಎಂದು ಭಾಸ್ಕರ್ ರಾವ್ ಮಂಗಳವಾರ X' ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಈ ಪೋಸ್ಟ್ ಅನೇಕ X' ಬಳಕೆದಾರರನ್ನು ಕೆರಳಿಸಿತು.
ಆಘಾತ ವ್ಯಕ್ತಪಡಿಸಿದ ನಿತಿನ್ ಶೇಷಾದ್ರಿ ಎಂಬ ವ್ಯಕ್ತಿ "ಸರ್ ನಾನು ಇದನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ" ಎಂದು ಹೇಳಿದ್ದಾರೆ.
ಇದು ನಾಥುರಾಮ್ ಗೋಡ್ಸೆ ಮತ್ತು ನಾರಾಯಣ್ ಆಪ್ಟೆ ಅವರನ್ನು ಅವರ ವಿಚಾರಣೆಗಳಲ್ಲಿ ಸಮರ್ಥಿಸಿಕೊಳ್ಳಲು ಬಳಸಿದ ಭಾಷೆಗೆ ಹೋಲುತ್ತಿರಲಿಲ್ಲವೇ?" ಎಂದು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ "@BlrCityPolice, ನೀವು ಈ ಟ್ವೀಟ್ ಮೇಲೆ ಕ್ರಮ ಕೈಗೊಳ್ಳಬೇಕು!" ಎಂದು ಅವರು ಆಗ್ರಹಿಸಿದ್ದಾರೆ. ನಂತರ ಬುಧವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಭಾಸ್ಕರ್ ರಾವ್ ಕ್ಷಮೆಯಾಚಿಸಿದ್ದಾರೆ.
"ಇಷ್ಟು ವಿದ್ಯಾವಂತ, ವಯಸ್ಸಾದ ಮತ್ತು ಕಾನೂನುಬದ್ಧವಾಗಿ ತಪ್ಪು ಕೃತ್ಯದ ಪರಿಣಾಮಗಳನ್ನು ಸಂಪೂರ್ಣವಾಗಿ ತಿಳಿದಿದ್ದರೂ ಸಹ, ಅಂತಹ ಕೃತ್ಯವನ್ನೆಸಗಿದ ವ್ಯಕ್ತಿಯ ನಡೆ ನನಗೆ ಆಘಾತವನ್ನುಂಟುಮಾಡಿತು. ನಾನು ಸುಪ್ರೀಂ ಕೋರ್ಟ್ ಅಥವಾ ಮುಖ್ಯ ನ್ಯಾಯಾಧೀಶರನ್ನು ಅಥವಾ ಯಾವುದೇ ಸಮುದಾಯವನ್ನು ಅವಮಾನಿಸಿಲ್ಲ. ನನ್ನ ಟ್ವೀಟ್ ಕೋಪ ಅಥವಾ ನೋವುಂಟುಮಾಡಿದ್ದರೆ, ಕ್ಷಮಿಸಿ" ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹೇಳಿದ್ದಾರೆ.
ಭಾಸ್ಕರ್ ರಾವ್ ಚಾಮರಾಜಪೇಟೆಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿ. ಝಡ್ ಜಮೀರ್ ಅಹ್ಮದ್ ಖಾನ್ ವಿರುದ್ಧ ಸೋತಿದ್ದರು.
ಸೋಮವಾರ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ 71 ವರ್ಷದ ವಕೀಲರು ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದಾರೆ.
"ಇದೆಲ್ಲದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗುವುದಿಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಘಟನೆಯ ಸಮಯದಲ್ಲಿ ವಿಚಲಿತರಾಗದ ಸಿಜೆಐ ವಕೀಲರಿಗೆ ತಿಳಿಸಿದರು ಮತ್ತು ಪ್ರಕರಣಗಳ ಪ್ರಸ್ತಾಪವನ್ನು ಮುಂದುವರಿಸಿದರು. ವಕೀಲರ ಪ್ರಕಾರ, ಸಿಜೆಐ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ವಕೀಲರಿಂದ ಪ್ರಕರಣಗಳ ಪ್ರಸ್ತಾಪವನ್ನು ಆಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.