ನವದೆಹಲಿ: ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರು ಗುರುವಾರ ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿದ್ದಾರೆ.
ತಾಲಿಬಾನ್ ಸರ್ಕಾರವು ನಾಲ್ಕು ವರ್ಷಗಳ ಹಿಂದೆ ಅಶ್ರಫ್ ಘನಿ ಸರ್ಕಾರವನ್ನು ಪತನಗೊಳಿಸಿತ್ತು. ನಂತರ ಕಾಬೂಲ್‌ನಲ್ಲಿ ಅಧಿಕಾರ ಹಿಡಿದ ತಾಲಿಬಾನ್ ಸರ್ಕಾರದ ಮೊದಲ ಭಾರತ ಭೇಟಿ ಇದಾಗಿದೆ.
ಮುತ್ತಾಕಿ ಭೇಟಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಧೀರ್ ಜೈಸ್ವಾಲ್ ಅವರು, ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಾಕಿ ಅವರನ್ನು ನವದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಹಾರ್ದಿಕವಾಗಿ ಸ್ವಾಗತಿಸುತ್ತೇವೆಂದು ಹೇಳಿದ್ದಾರೆ.
ಇದೇ ವೇಳೆ ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಅವರೊಂದಿಗೆ ಚರ್ಚೆಗೆ ಎದುರು ನೋಡುತ್ತಿದ್ದೇವೆಂದು ತಿಳಿಸಿದ್ದಾರೆ.
ಮುತ್ತಾಕಿ ಅವರು 6 ದಿನಗಳ ಕಾಲ ಭಾರತದಲ್ಲಿರಲಿದ್ದು, ಈ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ವಿವರವಾದ ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಮುತ್ತಾಕಿಯವರು ಕಳೆದ ತಿಂಗಳೇ ದೆಹಲಿಗೆ ಭೇಟಿ ನೀಡಬೇಕಿತ್ತಾದರೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC)ನಿರ್ಬಂಧದಿಂದಾಗಿ ಭೇಟಿ ರದ್ದಾಗಿತ್ತು. ಆದರೆ, ಸೆಪ್ಟೆಂಬರ್ 30 ರಂದು ಯುಎನ್ಎಸ್‌ಸಿ ಮುತ್ತಾಕಿ ಅವರಿಗೆ ಅಕ್ಟೋಬರ್ 9 ರಿಂದ 16 ರವರೆಗೆ ದೆಹಲಿಗೆ ಭೇಟಿ ನೀಡಲು ತಾತ್ಕಾಲಿಕವಾಗಿ ಪ್ರಯಾಣ ನಿಷೇಧದಿಂದ ವಿನಾಯಿತಿ ನೀಡಿದೆ. ಈ ವಿನಾಯಿತಿಯು ಅಫ್ಘಾನ್ ವಿದೇಶಾಂಗ ಸಚಿವರ ಭಾರತ ಭೇಟಿಗೆ ಮಾರ್ಗ ಮಾಡಿಕೊಟ್ಟಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತಾಲಿಬಾನ್‌ನ ಎಲ್ಲಾ ಪ್ರಮುಖ ನಾಯಕರ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದು, ಅವರಿಗೆ ವಿದೇಶಿ ಪ್ರಯಾಣಕ್ಕೆ ವಿನಾಯಿತಿ ಪಡೆಯುವ ಅಗತ್ಯವಿದೆ.