ಚಂಡೀಗಢ: ಬರೊಬ್ಬರಿ 20 ವರ್ಷ ಸಾಕಿ ಬೆಳೆಸಿದ ಮರವನ್ನುಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಕ್ಕೆ ವೃದ್ದ ಮಹಿಳೆಯೊಬ್ಬರು ಕಣ್ಣೀರು ಹಾಕಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಛತ್ತಿಸ್‌ಗಢದ ಖೈರಾಗರ್ ಜಿಲ್ಲೆಯ ಸಾರಾಗೊಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 20 ವರ್ಷಗಳಿಗೂ ಹೆಚ್ಚು ಕಾಲದ ಹಿಂದೆ ತಾನು ಪ್ರೀತಿಯಿಂದ ನೆಟ್ಟು ಪೋಷಿಸಿದ ಅಶ್ವತ್ಥ ಮರವನ್ನು ಕೆಲವು ವ್ಯಕ್ತಿಗಳು ಕಡಿದುಹಾಕಿದ ನಂತರ ವೃದ್ಧ ಮಹಿಳೆಯೊಬ್ಬರು ದುಃಖದಿಂದ ಗೋಳಾಡುತ್ತಿರುವ ದೃಶ್ಯ ವೈರಲ್ ಆಗಿದೆ.
85 ವರ್ಷದ ಡಿಯೋಲಾ ಬಾಯಿ ಎಂಬ ಮಹಿಳೆಯೇ ಮರ ಕಡಿದಿದ್ದಕ್ಕೆ ದುಃಖಿತರಾಗಿ ಅಳುತ್ತಿರುವ ವಿಡಿಯೋ ಇದಾಗಿದ್ದು, ಅವರು ಸುಮಾರು ಎರಡು ದಶಕಗಳ ಹಿಂದೆ ತಮ್ಮ ಅಂಗಳದಲ್ಲಿ ಒಂದು ಸಣ್ಣ ಅರಳಿ ಸಸಿಯನ್ನು ನೆಟ್ಟಿದ್ದರು. ಕಾಲ ಕಾಲಕ್ಕೆ ಅದಕ್ಕೆ ನೀರು ಹರಿಸುತ್ತಾ ತನ್ನ ಸ್ವಂತ ಮಗುವಿನಂತೆ ಅವರು ರಕ್ಷಿಸಿದ್ದರು. ಅವರ ಆರೈಕೆಯಲ್ಲಿ ಅರಳಿ ಮರ ಬೃಹತ್ ಮರವಾಗಿ ಬೆಳೆದಿತ್ತು ಎಂದು ಸ್ಥಳೀಯ ಖೈರಾಗಢ ನಿವಾಸಿ ನರೇಂದ್ರ ಕುಮಾರ್ ಸೋನಿ ಹೇಳಿದ್ದಾರೆ.
ವಿಡಿಯೋ ವೈರಲ್
ಈ ಮರವನ್ನು ಹಣದಾಸೆಗಾಗಿ ಕಡಿದಿದ್ದಾರೆ ಎಂದು ಆರೋಪಿಸಲಾಗಿದ್ದು, ತಾನು ಪ್ರೀತಿಯಿಂದ ಸಲಹಿದ ಅರಳಿ ಮರವನ್ನು ಕೊಡಲಿಯಿಂದ ಕಡಿದ ನಂತರ ಮರ ಅಡ್ಡಬಿದ್ದಿದ್ದನ್ನು ನೋಡಿ ವೃದ್ಧೆ ಭಾವುಕರಾಗಿದ್ದಾರೆ. ಕತ್ತರಿಸಿದ ಮರದ ಪಕ್ಕದಲ್ಲಿ ಮಹಿಳೆ ಕುಳಿತು ಕಣ್ಣೀರು ಹಾಕುತ್ತಿದ್ದ ದೃಶ್ಯ ಇದೀಗ ವೈರಲ್ ಆಗುತ್ತಿದೆ.
ಇಬ್ಬರ ಬಂಧನ
ಈ ಮರ ಸರ್ಕಾರಿ ಜಾಗದಲ್ಲಿ ಇತ್ತು ಎಂದು ವರದಿಯಾಗಿದ್ದು, ಈ ಅಶ್ವತ್ಥ ಮರವನ್ನು ಕಡಿದ ಆರೋಪದ ಮೇಲೆ ಖೈರಾಗಢ ಚುಯಿಖಾದನ್ ಗಂಡೈ (ಕೆಸಿಜಿ) ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಖೈರಾಗಢ ಎಸ್‌ಹೆಚ್‌ಒ ಅನಿಲ್ ಶರ್ಮಾ ಹೇಳಿದ್ದಾರೆ. ಸಾರಾ ಗೊಂಡಿ ಗ್ರಾಮಸ್ಥರು ಸುಮಾರು 20 ವರ್ಷಗಳಿಂದ ಇದನ್ನು ಪೂಜಿಸುತ್ತಿದ್ದರು ಎಂದು ಅವರು ಹೇಳಿದರು. ಸಾರಾಗೊಂಡಿ ಗ್ರಾಮದ ನಿವಾಸಿ ಪ್ರಮೋದ್ ಪಟೇಲ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊದಲ ಪ್ರಯತ್ನ ವಿಫಲ, ಮುಂಜಾನೆ ಕಿಡಿಗೇಡಿಗಳ ಅಟ್ಟಹಾಸ
ಇನ್ನು ಪೊಲೀಸ್ ಮೂಲಗಳ ಪ್ರಕಾರ, ಅಕ್ಟೋಬರ್ 5 ರ ಬೆಳಗ್ಗೆ ಖೈರಾಗಢ ನಿವಾಸಿಗಳಾದ ಇಕ್ಬಾಲ್ ಮೆಮನ್ ಅವರ ಮಗ ಇಮ್ರಾನ್ ಮೆಮನ್ ಸಹಚರರನ್ನು ಕರೆತಂದು ಈ ಮರವನ್ನು ಕಡಿಯಲು ಯತ್ನಿಸಿದ್ದರು. ಆದರೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ ನಂತರ ಕಿಡಿಗೇಡಿಗಳು ಪರಾರಿಯಾಗಿದ್ದರು.
ಆದರೆ ಅಂದು ವಾಪಸ್ ಆಗಿದ್ದ ಕಿಡಿಗೇಡಿಗಳು ಬಳಿಕ ಅಕ್ಟೋಬರ್ 6 ಮುಂಜಾನೆ ಹೊತ್ತಿಗೆ ಮತ್ತೆ ಬಂದು ಮರವನ್ನು ಕಡಿದು ಹಾಕಿದ್ದಾರೆ. ಖೈರಾಗಢ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶಪೂರ್ವಕ ಉದ್ದೇಶ) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಚಾರಣೆಯ ಸಮಯದಲ್ಲಿ ಬಂಧಿತ ಆರೋಪಿಯಾದ ಇಮ್ರಾನ್ ತಾನು ಖರೀದಿಸಿದ ಜಮೀನಿನ ಎದುರಿನ ಸರ್ಕಾರಿ ಭೂಮಿಯಲ್ಲಿರುವ ಮರವನ್ನು ಕಿತ್ತುಹಾಕಲು ಯೋಜಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಭೂಮಿಯನ್ನು ಸಮತಟ್ಟು ಮಾಡಲು ಬಯಸಿದ್ದಾಗಿ ಅವನು ಪೊಲೀಸರಿಗೆ ತಿಳಿಸಿದ್ದಾನೆ. ಮರ ಕಡಿಯುವ ಯಂತ್ರದಿಂದ ಮರವನ್ನು ಕಡಿಯಲು ಪ್ರಕಾಶ್ ಎಂಬಾತ ಸಹಾಯ ಮಾಡಿದ್ದು, ನಾನು ಹತ್ತಿರದಲ್ಲಿ ನಿಂತು ನೋಡುತ್ತಿದ್ದೆ ಎಂದು ಹೇಳಿದ್ದಾನೆ.
ಹೊಸ ಸಸಿ ನೆಟ್ಟ ವೃದ್ಧೆ
ಇನ್ನು ಈ ಘಟನೆಯ ನಂತರ, ಗ್ರಾಮಸ್ಥರು ಅದೇ ಸ್ಥಳದಲ್ಲಿ ಹೊಸ ಅಶ್ವಥ ಗಿಡವನ್ನು ನೆಟ್ಟು ಅದನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಹಳೆಯ ಮರವನ್ನು 20 ವರ್ಷಗಳ ಕಾಲ ಪೋಷಿಸಿದ ವೃದ್ಧ ಮಹಿಳೆ ಇದೀಗ ಅದೇ ಜಾಗದಲ್ಲಿ ಮತ್ತೊಂದು ಸಸಿ ನೆಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.