ಚಂಡೀಗಢ: ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಹರಿಯಾಣದ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಮನೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಭೇಟಿ ನೀಡಿದ್ದು, ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಹರಿಯಾಣ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಅವರು ಬೆಳಿಗ್ಗೆ 11.08 ಕ್ಕೆ ಸೆಕ್ಟರ್ 24 ನಲ್ಲಿರುವ ಕುಮಾರ್ ಅವರ ಅಧಿಕೃತ ನಿವಾಸಕ್ಕೆ ತಲುಪಿ ಸಂತಾಪ ಸೂಚಿಸಿದರು.
ಕುಮಾರ್ ಅವರ ಕುಟುಂಬವನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಅವರು, ಈ ವಿಷಯವು ಎಲ್ಲಾ ದಲಿತ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಕುಮಾರ್ ಅವರು ಸ್ಥೈರ್ಯ ಕುಗ್ಗಿಸುವ ಮತ್ತು ವೃತ್ತಿಜೀವನಕ್ಕೆ ಹಾನಿ ಮಾಡುವ ಉದ್ದೇಶದಿಂದ ವ್ಯವಸ್ಥಿತ ತಾರತಮ್ಯವನ್ನು ಎದುರಿಸಿದ್ದಾರೆಂದು ಆರೋಪಿಸಿದರು.
ಇದೇ ವೇಳೆ ಹರಿಯಾಣ ಸರ್ಕಾರವನ್ನು ಟೀಕಿಸಿದ ಅವರು, ಹರಿಯಾಣ ಮಖ್ಯಮಂತ್ರಿ, ಮುಕ್ತ ಮತ್ತು ನ್ಯಾಯಯುತ ತನಿಖೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ಈ ಪ್ರಕರಣ ದಲಿತರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿದರು.
ಪೂರಣ್ ಕುಮಾರ್ ಜಿ ಅವರ ಪತ್ನಿ ಸೇವೆಯಲ್ಲಿರುವ ಅಧಿಕಾರಿಯಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರುವುದು ಹೇಗೆ ಎಂದು ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ, ಈ ಪ್ರಕರಣದಲ್ಲಿ ಸರ್ಕಾರ ಸಾಧ್ಯವಾದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪೂರಣ್ ಕುಮಾರ್ ಅವರ ಹೆಣ್ಣುಮಕ್ಕಳಿಗೆ ಆಸೆಯಂತೆ, ತಂದೆಯ ಅಂತ್ಯಕ್ರಿಯೆ ನಡೆಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ಪ್ರಧಾನಿ ಮೋದಿ ಹಾಗೂ ಹರಿಯಾಣ ಮುಖ್ಯಮಂತ್ರಿ ಬಳಿ ಮನವಿ ಮಾಡುತ್ತೇನೆಂದು ಹೇಳಿದ್ದಾರೆ.
2001 ರ ಬ್ಯಾಚ್‌ನ 52 ವರ್ಷದ ಐಪಿಎಸ್ ಅಧಿಕಾರಿ ವೈ ಪುರಣ್ ಕುಮಾರ್ ಅಕ್ಟೋಬರ್ 7 ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಸಾವಿಗೂ ಮುನ್ನ 8 ಪುಟಗಳ ಡೆತ್ ನೋಟ್ ಬರೆದಿರುವ ಅವರು, ಕಪೂರ್ ಮತ್ತು ಬಿಜರ್ನಿಯಾ ಸೇರಿದಂತೆ ಎಂಟು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳ ಮೇಲೆ ಜಾತಿ ಆಧಾರಿತ ತಾರತಮ್ಯ, ಮಾನಸಿಕ ಕಿರುಕುಳ, ಸಾರ್ವಜನಿಕ ಅವಮಾನ ಮತ್ತು ಅಧಿಕಾರ ದುರುಪಯೋಗದ ಆರೋಪ ಮಾಡಿದ್ದಾರೆ.
ಏತನ್ಮಧ್ಯೆ, ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರದ ಮೊದಲ ವಾರ್ಷಿಕೋತ್ಸವ ಆಚರಣೆಗಾಗಿ ಪ್ರಧಾನಿ ಮೋದಿ ಅವರು ಅಕ್ಟೋಬರ್ 17 ರಂದು ಸೋನಿಪತ್‌ಗೆ ನೀಡಬೇಕಿದ್ದ ಭೇಟಿಯನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಭೇಟಿ ರದ್ದತಿಗೆ ಯಾವುದೇ ಅಧಿಕೃತ ಕಾರಣವನ್ನು ನೀಡಲಾಗಿಲ್ಲವಾದರೂ, ಐಪಿಎಸ್ ಅಧಿಕಾರಿಯ ಆತ್ಮಹತ್ಯೆಯ ನಂತರದ ಪರಿಸ್ಥಿತಿ ಪ್ರಧಾನಿಯವರ ಭೇಟಿಗೆ ಅನುಕೂಲಕರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.