ಅಗರ್ತಲಾ: ತ್ರಿಪುರಾದಲ್ಲಿ ಓರ್ವ ಗ್ರಾಮಸ್ಥನನ್ನು ಕೊಂದ ನಂತರ ಮೂವರು ಬಾಂಗ್ಲಾದೇಶದ ಸ್ಮಗ್ಲರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ಭಾರತ ಶುಕ್ರವಾರ ಹೇಳಿದೆ.
ಅಕ್ಟೋಬರ್ 15 ರಂದು ನಡೆದ ಈ ಘಟನೆಯು ರಾಜತಾಂತ್ರಿಕ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಬಾಂಗ್ಲಾದೇಶವು ಮೃತರಿಗೆ ನ್ಯಾಯವನ್ನು ಕೋರಿದೆ. ಅಲ್ಲದೇ ತಕ್ಷಣ, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಿದ ಮೂವರು ಬಾಂಗ್ಲಾದೇಶಿ ವಲಸಿಗರ ಹತ್ಯೆ ಬಗ್ಗೆ ಬಾಂಗ್ಲಾದೇಶ ಪ್ರತಿಭಟನೆ ದಾಖಲಿಸಿದೆ. ಇದು ಘೋರ, ಸ್ವೀಕಾರಾರ್ಹವಲ್ಲದ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಬಾಂಗ್ಲಾ ವಿದೇಶಾಂಗ ಸಚಿವಾಲಯ ಖಂಡಿಸಿದೆ.
"ಬಾಂಗ್ಲಾದೇಶದ ಆರೋಪವನ್ನು ತಳ್ಳಿಹಾಕಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಗಡಿಯ ಮೂರು ಕಿಲೋಮೀಟರ್ ಒಳಗಡೆ ಘಟನೆ ಸಂಭವಿಸಿದೆ. ಅಕ್ರಮ ವಲಸೆಗಾರರು ಬಿಡ್ಯಾಬಿಲ್ ಗ್ರಾಮದಿಂದ ಜಾನುವಾರುಗಳನ್ನು ಕದಿಯಲು ಪ್ರಯತ್ನಿಸಿದಾಗ ಹರಿತವಾದ ಆಯುಧಗಳಿಂದ ದಾಳಿ ಮಾಡಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಸುದ್ದಿ ತಿಳಿದು ಅಧಿಕಾರಿಗಳು ಅಲ್ಲಿಗೆ ಧಾವಿಸುವಷ್ಟರಲ್ಲಿ ಇಬ್ಬರು ವಲಸೆಗಾರರು ಮೃತಪಟ್ಟಿದ್ದರು. ಮೂರನೇಯವ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಎಲ್ಲಾ ಮೃತದೇಹಗಳನ್ನು ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಇಂತಹ ಅಮಾನವೀಯ ಕೃತ್ಯಗಳು ಮರುಕಳಿಸುವುದನ್ನು ತಡೆಯಲು ಪ್ರಾಮಾಣಿಕ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಬಾಂಗ್ಲಾದೇಶ ಭಾರತವನ್ನು ಒತ್ತಾಯಿಸಿದೆ. ಎಲ್ಲಾ ವ್ಯಕ್ತಿಗಳು, ಅವರ ರಾಷ್ಟ್ರೀಯತೆಯನ್ನು ಲೆಕ್ಕಿಸದೆ, ಅವರ ಮಾನವ ಹಕ್ಕುಗಳ ಸಂಪೂರ್ಣ ರಕ್ಷಣೆಗೆ ಅರ್ಹರಾಗಿರುತ್ತಾರೆ ಎಂದು ಬಾಂಗ್ಲಾದೇಶ ಸರ್ಕಾರ ಹೇಳಿದೆ. ಕಳ್ಳಸಾಗಾಣಿಕೆಯನ್ನು ತಡೆಯುವ ಉದ್ದೇಶದಿಂದ ಗಡಿ ಬೇಲಿ ಹಾಕುವ ಕ್ರಮ ಬೆಂಬಲಿಸುವಂತೆ ಜೈಸ್ವಾಲ್ ಬಾಂಗ್ಲಾದೇಶವನ್ನು ಒತ್ತಾಯಿಸಿದ್ದಾರೆ.