ಪತ್ತನಂತಿಟ್ಟ: ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ದೀಪಾವಳಿ ಬಲಿಪಾಡ್ಯಮಿ ದಿನ ಬೆಳಗ್ಗೆ 11:50 ಕ್ಕೆ ಸನ್ನಿಧಾನಂನಲ್ಲಿ ಅಯ್ಯಪ್ಪ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಅವರು ಪಂಪಾದಿಂದ ಇರುಮುಡಿಯನ್ನು ಹೊತ್ತುಕೊಂಡು ಪತಿನೆಟ್ಟಂ ಪಾಡಿಯನ್ನು ಹತ್ತಿ ಗರ್ಭಗುಡಿಯ ಬಳಿ ತಲುಪಿದರು. ಕೇರಳ ದೇವಸ್ವಂಗಳ ಸಚಿವ ವಿಎನ್ ವಾಸವನ್ ಭೇಟಿಯ ಸಮಯದಲ್ಲಿ ಅವರೊಂದಿಗೆ ಜೊತೆಗಿದ್ದರು.
ರಾಷ್ಟ್ರಪತಿಗಳು ಬೆಳಗ್ಗೆ 9:05 ಕ್ಕೆ ಪ್ರಮದಂಗೆ ಇಳಿದು ರಸ್ತೆಯ ಮೂಲಕ ಪಂಪಾಕ್ಕೆ ಬೆಂಗಾವಲು ಪಡೆಯಲ್ಲಿ ಪ್ರಯಾಣಿಸಿದರು. ಅವರು ಪಂಪಾ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆಗೈದರು. ಪೂಜೆ ಸಲ್ಲಿಸುವಾಗ ದೇವಾಲಯದ ಮುಖ್ಯಸ್ಥರಾದ ವಿಷ್ಣು ನಂಬೂದಿರಿ ಮತ್ತು ಶಂಕರನ್ ನಂಬೂದಿರಿ ಇರುಮುಡಿಕೆಟ್ಟು ಸಿದ್ಧಪಡಿಸುವಲ್ಲಿ ಅವರಿಗೆ ಸಹಾಯ ಮಾಡಿದರು.
ಶಬರಿಮಲೆ ದರ್ಶನದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ಎರಡು ದಿನಗಳಿಂದ ಭದ್ರತಾ ನಿಯಂತ್ರಣದಲ್ಲಿರುವ ಸನ್ನಿಧಾನಂನ ಮುಖ್ಯ ಕಚೇರಿ ಸಂಕೀರ್ಣದಲ್ಲಿ ವಿಶೇಷವಾಗಿ ವ್ಯವಸ್ಥೆ ಮಾಡಲಾದ ಕೋಣೆಯಲ್ಲಿ ಎರಡು ಗಂಟೆಗಳ ಕಾಲ ತಂಗಿದರು. ಇತ್ತೀಚೆಗೆ ನವೀಕರಿಸಿದ ಅಡುಗೆಮನೆಯಲ್ಲಿ ಅವರಿಗೆ ಊಟ ಸಿದ್ದಪಡಿಸಲಾಯಿತು. ರಾಷ್ಟ್ರಪತಿ ಭವನದ ಸಿಬ್ಬಂದಿ ವ್ಯವಸ್ಥೆಗಳನ್ನು ನೋಡಿಕೊಂಡರು.
ರಾಷ್ಟ್ರಪತಿಗಳು ಮಧ್ಯಾಹ್ನ 3:10 ಕ್ಕೆ ಸನ್ನಿಧಾನಂನಿಂದ ಹೊರಟು 4:20 ಕ್ಕೆ ನಿಲಕ್ಕಲ್ ನಿಂದ ತಿರುವನಂತಪುರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿದ್ದಾರೆ.