ನವದೆಹಲಿ: ಜಾವೆಲಿನ್ ಥ್ರೋ ತಾರೆ, ಒಲಿಂಪಿಕ್ ಚಿನ್ನದ ಪದಕ ವಿಜೇತ ಕ್ರೀಡಾಪಟು ನೀರಜ್ ಚೋಪ್ರಾ ಅವರು ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿ (ಪ್ರಾದೇಶಿಕ ಸೇನೆ) ಸೇರ್ಪಡೆಯಾಗಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೆಹಲಿಯ ಕಚೇರಿಯಲ್ಲಿ ನೀರಜ್ ಚೋಪ್ರಾ ಅವರಿಗೆ ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯ ಲಾಂಛನವನ್ನು ತೊಡಿಸಿ ಅಭಿನಂದಿಸಿದರು. ಈ ವೇಳೆ ಭಾರತೀಯ ಸೇನೆಯ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಹಾಜರಿದ್ದರು.
ನೀರಜ್ ಚೋಪ್ರಾ ಭಾರತದ ಅತ್ಯುತ್ತಮ ಕ್ರೀಡಾಪಟು. ಅವರ ನಿರಂತರ ಪರಿಶ್ರಮ, ದೇಶಭಕ್ತಿಯು ಭಾರತೀಯ ಮನೋಭಾವದ ಸಂಕೇತ. ಭವಿಷ್ಯದಲ್ಲಿ ಅವರ ಎಲ್ಲಾ ಪ್ರಯತ್ನಗಳಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ರಾಜನಾಥ್ ಸಿಂಗ್ ತಮ್ಮ ಎಕ್ಸ್ ಖಾತೆಯಲ್ಲಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.
2020ರ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚಿನ್ನದ ಪದಕ ಗೆದ್ದಿದ್ದರು. 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅವರಿಗೆ ಪರಮ ವಿಶಿಷ್ಟ ಸೇವಾ ಮೆಡಲ್, ಪದ್ಮ ಶ್ರೀ ಹಾಗೂ ವಿಶಿಷ್ಟ ಸೇವಾ ಮೆಡಲ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನೀರಜ್ ಚೋಪ್ರಾ ಸಹ ಟೆರಿಟೋರಿಯಲ್ ಆರ್ಮಿ ಸೇರಿದ್ದರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.