ಹೈದರಾಬಾದ್ ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ವೋಲ್ವೋ ಬಸ್ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಧಗಧಗಿಸಿ ಹತ್ತಾರು ಮಂದಿ ಪ್ರಯಾಣಿಕರು ಸಜೀವ ದಹನಕ್ಕೀಡಾದ ಘಟನೆ ಎಂಥವರ ಮನಕಲಕುವಂತೆ ಮಾಡಿದೆ.
ಇದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅದೃಷ್ಟವಶಾತ್ ಅಪಾಯದಿಂದ ಪಾರಾದ ಜಯಂತ್ ಕುಶ್ವಾಹ ಘಟನೆಯ ಬಗ್ಗೆ ವಿವರಿಸಿದ್ದಾರೆ. ಬೆಂಕಿ ಹತ್ತಿಕೊಂಡ ತಕ್ಷಣ ಎಚ್ಚರವಾಯಿತು ಎನ್ನುತ್ತಾರೆ.
ಇಂದು ನಸುಕಿನ ಜಾವ 2:30-2:40 ರ ಸುಮಾರಿಗೆ, ಬಸ್ ನಿಂತಿತು, ನಾನು ಎಚ್ಚರವಾದಾಗ ಬಸ್ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದೆ. ಅದು ಬೆಂಕಿ ಎಂದು ನನಗೆ ನಂಬಲು ಸಾಧ್ಯವಾಗಲಿಲ್ಲ. ಆ ಕ್ಷಣಗಳ ನಂತರ ಅದು ಬೆಂಕಿ ಎಂದು ನನಗೆ ಅರಿವಾಯಿತು.
ಕೇವಲ ಇಬ್ಬರು ಮೂವರು ಮಾತ್ರ ಎಚ್ಚರವಾಗಿದ್ದರು. ನಾವು ಬೆಂಕಿ...ಬೆಂಕಿ ಎಂದು ಕೂಗಿ ಎಲ್ಲರನ್ನೂ ಎಬ್ಬಿಸಿದೆವು. ಬಾಗಿಲುಗಳು ಲಾಕ್ ಆಗಿದ್ದವು. ಚಾಲಕರನ್ನು ಪತ್ತೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಮುಖ್ಯ ಬಾಗಿಲು ಲಾಕ್ ಆಗಿದ್ದರಿಂದ ನಾವು ತುರ್ತು ಕಿಟಕಿಯನ್ನು ಒಡೆದು ಕಿಟಕಿಯಿಂದ ಹೊರಗೆ ಹಾರಿ ಬಂದೆವು. ಅನೇಕ ಜನರು ಕಿಟಕಿಗಳನ್ನು ಒಡೆದು ಬಸ್‌ನಿಂದ ಹೊರಗೆ ಹಾರಿ ಜೀವ ಉಳಿಸಿಕೊಂಡರು ಎಂದು ಜಯಂತ್ ANI ಸುದ್ದಿ ಸಂಸ್ಥೆಗೆ ವಿವರಿಸಿದರು.
ಘಟನೆಯ ಮತ್ತೊಬ್ಬ ಪ್ರತ್ಯಕ್ಷದರ್ಶಿ ಅಶ್ವಿನ್ ಮಾತನಾಡಿ, ಬಸ್ ಬೆಂಕಿಗೆ ಆಹುತಿಯಾಗುತ್ತಿದ್ದಂತೆ ಸುಮಾರು 20 ಜನರು ಹೊರಬರುವಲ್ಲಿ ಯಶಸ್ವಿಯಾದರು, ಆದರೆ ಇತರರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಿಟಕಿ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಚಾಲಕನಿಗೆ ತಿಳಿಸಿದ್ದು ನಾನೇ ಎಂದು ಅಶ್ವಿನ್ ಹೇಳುತ್ತಾರೆ.
ನಿನ್ನೆ ರಾತ್ರಿ, ನಾವು ಬೆಂಗಳೂರಿಗೆ ಪ್ರಯಾಣಿಸಲು ಕುಕತ್ಪಲ್ಲಿಯಲ್ಲಿ ಬಸ್ ಹತ್ತಿದೆವು. ನಾನು ಚಾಲಕನ ಸೀಟಿನ ಹಿಂದೆ ಕುಳಿತಿದ್ದೆ. ದೀರ್ಘ ಪ್ರಯಾಣದ ನಂತರ, ಬೆಳಗಿನ ಜಾವ 2:30 ರಿಂದ 3:30 ರ ನಡುವೆ, ಕಿಟಕಿ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ನಾನು ಗಮನಿಸಿದೆ.
ತಕ್ಷಣ ಚಾಲಕನಿಗೆ ಎಚ್ಚರಿಕೆ ನೀಡಿದೆ. ಬಸ್ ನ್ನು ತಕ್ಷಣವೇ ನಿಲ್ಲಿಸಿದರು. ಈ ಮಧ್ಯೆ, ನಾವು ತಪ್ಪಿಸಿಕೊಳ್ಳಲು ಕಿಟಕಿಗಳನ್ನು ಒಡೆಯಲು ಪ್ರಯತ್ನಿಸಿದೆವು. ಸುಮಾರು 23 ಜನರು ಬಸ್‌ನಿಂದ ಹೊರಬರುವಲ್ಲಿ ಯಶಸ್ವಿಯಾದೆವು, ಆದರೆ ಇತರರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಶ್ವಿನ್ ANI ಸುದ್ದಿಸಂಸ್ಥೆಗೆ ತಿಳಿಸಿದರು.
ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ 43 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಬೆಂಕಿ ಹತ್ತಿಕೊಂಡು ಉರಿದು ಇಡೀ ಬಸ್ ವ್ಯಾಪಿಸಿ ಕನಿಷ್ಠ 20 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ದೃಢಪಡಿಸಿದರು. ಕರ್ನೂಲ್ ಜಿಲ್ಲಾಧಿಕಾರಿ (ಡಿಸಿ) ಎ ಸಿರಿ ಮಾತನಾಡಿ, ಒಟ್ಟು 11 ಶವಗಳನ್ನು ಗುರುತಿಸಲಾಗಿದ್ದು, ಉಳಿದ ಒಂಬತ್ತು ಶವಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಬಸ್ ಬೈಕ್ ಗೆ ಡಿಕ್ಕಿ ಹೊಡೆದಾಗ ಬೈಕ್‌ನಿಂದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತು. 43 ಮಂದಿಯಲ್ಲಿ, ನಾವು 23 ಪ್ರಯಾಣಿಕರನ್ನು ಪತ್ತೆಹಚ್ಚಿದ್ದೇವೆ; ಅವರು ಸುರಕ್ಷಿತರಾಗಿದ್ದಾರೆ. 11 ಮೃತದೇಹಗಳನ್ನು ಬಸ್‌ನಿಂದ ಹೊರತೆಗೆಯಲಾಗಿದೆ. 21 ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 9 ಶವಗಳ ಬಗ್ಗೆ ನಾವು ದೃಢಪಡಿಸಬೇಕಾಗಿದೆ ಎಂದು ಡಿಸಿ ಸಿರಿ ತಿಳಿಸಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ರಾಜ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತೆಲಂಗಾಣ ಸರ್ಕಾರವು ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡಲು ಸಹಾಯವಾಣಿಯನ್ನು ಸಹ ಸ್ಥಾಪಿಸಿದೆ.