ಜೈಪುರ: ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (ATS) ಶುಕ್ರವಾರ ಬೆಳಗ್ಗೆ ರಾಜ್ಯದ ವಿವಿಧ ಕಡೆಗಳಲ್ಲಿ ಶಂಕಿತ ಐವರು ಉಗ್ರರನ್ನು ಬಂಧಿಸಿದೆ. ಅವರ ಚಟುವಟಿಕೆಗಳ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಐವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ATS ಹಲವರ ಚಲನವಲನಗಳ ಮೇಲೆ ಸೂಕ್ಷ್ಮವಾಗಿ ಗಮನ ಕೇಂದ್ರಿಕರಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚಿನ ಗುಪ್ತಚರ ಮತ್ತು ಅನುಮಾನಾಸ್ಪದ ನಡವಳಿಕೆ ಆಧರಿಸಿ, ಮುಂಜಾನೆ ಅನೇಕ ಜಿಲ್ಲೆಗಳಲ್ಲಿ ಪೊಲೀಸರೊಂದಿಗೆ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ಸಂಘಟಿತ ದಾಳಿ ನಡೆಸಿದ್ದಾರೆ.
ಬಾರ್ಮರ್‌ನಿಂದ ಉಸಾಮಾ ಉಮರ್ (25), ಜೋಧಪುರದಿಂದ ಮಸೂದ್; ಜೋಧಪುರದ ಪಿಪಾಡ್‌ನಿಂದ ಮೊಹಮ್ಮದ್ ಅಯೂಬ್; ಕರೌಲಿಯಿಂದ ಮೊಹಮ್ಮದ್ ಜುನೈದ್ ಮತ್ತು ಬಾರ್ಮರ್‌ನಿಂದ ಬಸೀರ್ ಎಂಬುವರನ್ನು ಬಂಧಿಸಲಾಗಿದೆ.
ಈ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ಅನುಮಾನ ಕಂಡುಬಂದಿದ್ದು, ಹೆಚ್ಚಿನ ವಿಚಾರಣೆಗಾಗಿ ಜೈಪುರದ ಎಟಿಎಸ್ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ ಎಂದು ಐಜಿ ಎಟಿಎಸ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.