ಮುಂಬೈ: ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಘಟನೆ ಮುಂಬೈಯಲ್ಲಿ ನಡೆದಿದೆ.
ಸಕಿನಾಕಾ ಪ್ರದೇಶದ ಖೈರಾನಿ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ತೂಗಾಡುತ್ತಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ಗಣಪತಿ ವಿಗ್ರಹಕ್ಕೆ ತಗುಲಿದೆ. ಪರಿಣಾಮ ಗಣಪತಿ ಬಳಿ ಇದ್ದ ಆರು ಮಂದಿ ಭಕ್ತರಿಗೂ ವಿದ್ಯುತ್ ಸ್ಪರ್ಶಿಸಿದೆ.
ಕೆಲವು ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಲ್ಲಿ ಒಬ್ಬರನ್ನು ಸರ್ಕಾರಿ ಆಸ್ಪತ್ರೆ ಸೆವೆನ್ ಹಿಲ್ಸ್ ಗೆ ಕರೆದೊಯ್ಯಲಾಗಿತ್ತು. ಆದರೆ ಆತ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೃತನನ್ನು ಸುಕುಮಾರನ್ ಕುಮಾರನ್ (36) ಎಂದು ಗುರುತಿಸಲಾಗಿದೆ. ಇತರ ಐವರನ್ನು ಪ್ಯಾರಾಮೌಂಟ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.