ಕೋಲ್ಕತಾ: ಕೋಲ್ಕತಾದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬಯಲಿಗೆ ಬಂದಿದ್ದು, ಆಪ್ತ ಸ್ನೇಹಿತೆಯ ಜನ್ಮ ದಿನಾಚರಣೆ ಮಾಡುವ ನೆಪದಲ್ಲಿ ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಭೀಕರ ಘಟನೆ ವರದಿಯಾಗಿದೆ.
ಕೋಲ್ಕತ್ತಾದ ದುಬಾರಿ ಪ್ರದೇಶದಲ್ಲಿ 20 ವರ್ಷದ ಯುವತಿಯ ಹುಟ್ಟುಹಬ್ಬದಂದು ಆಕೆಯ ಇಬ್ಬರು ಗೆಳೆಯರೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಈ ಘಟನೆ ಶುಕ್ರವಾರ ಕೋಲ್ಕತಾ ನಗರದ ದಕ್ಷಿಣ ಹೊರವಲಯದಲ್ಲಿರುವ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ. ಅಪರಾಧದ ನಂತರ ನಾಪತ್ತೆಯಾಗಿದ್ದ ಇಬ್ಬರು ಆರೋಪಿಗಳನ್ನು ಚಂದನ್ ಮಲಿಕ್ ಮತ್ತು ದೀಪ್ ಎಂದು ಗುರುತಿಸಲಾಗಿದೆ. ಈ ಪೈಕಿ ದೀಪ್ ಸರ್ಕಾರಿ ಉದ್ಯೋಗಿ ಎಂದು ವರದಿಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಹರಿದೇವ್‌ಪುರದ ನಿವಾಸಿ ಯುವತಿಗೆ ಆರೋಪಿ ಚಂದನ್ ತನ್ನ ಹುಟ್ಟುಹಬ್ಬವನ್ನು ಆಚರಿಸುವ ನೆಪದಲ್ಲಿ ದೀಪ್ ಮನೆಗೆ ಕರೆದೊಯ್ದಿದ್ದಾನೆ. ಈ ವೇಳೆ ಆಕೆಯ ಮೇಲೆ ಹಲ್ಲೆ ಮಾಡಿ ಇಬ್ಬರೂ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾಗಿದೆ.
ಯುವತಿ ಹುಟ್ಟುಹಬ್ಬಕ್ಕಾಗಿ ಆಕೆಯನ್ನು ಫ್ಲಾಟ್ ಕರೆದ ಚಂದನ್ ಆಕೆಯನ್ನು ತನ್ನ ಸ್ನೇಹಿತ ದೀಪ್ ಮನೆಗೆ ಕರೆದೊಯ್ದಿದ್ದ. ಈ ವೇಳೆ ರೂಮಿನಲ್ಲೂ ಮೂವರೂ ಊಟ ಮಾಡಿದ್ದಾರೆ. ಬಳಿಕ ಸಂತ್ರಸ್ಥ ಯುವತಿ ಮನೆಗೆ ವಾಪಸ್ ಆಗಲು ಮುಂದಾಗಿದ್ದು, ಆಕೆಯನ್ನು ಇಬ್ಬರೂ ಆರೋಪಿಗಳು ತಡೆದಿದ್ದಾರೆ. ಆಕೆ ಹಠ ಮಾಡಿದ ನಂತರ ರೂಮಿನ ಬಾಗಿಲು ಹಾಕಿ ಆಕೆ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ" ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಮಾರನೆಯ ದಿನ ಅಂದರೆ ಶನಿವಾರ ಬೆಳಿಗ್ಗೆ 10.30ರ ಸುಮಾರಿಗೆ ಸಂತ್ರಸ್ಥ ಯುವತಿ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮನೆಗೆ ಹಿಂದಿರುಗಿದ ನಂತರ, ಆಕೆ ಘಟನೆಯ ಬಗ್ಗೆ ತಮ್ಮ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ಪೊಲೀಸ್ ದೂರು ನೀಡಿದ ಬಳಿಕ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ಅಧಿಕಾರಿಯೊಬ್ಬರು 'ನಾವು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟವನ್ನು ಪ್ರಾರಂಭಿಸಿದ್ದೇವೆ" ಎಂದು ಹೇಳಿದರು.
ಸಂತ್ರಸ್ಥೆಗೆ ಚಂದನ್ ಕೆಲ ತಿಂಗಳ ಹಿಂದಷ್ಟೇ ಪರಿಚಯವಾಗಿತ್ತು. ದಕ್ಷಿಣ ಕೋಲ್ಕತ್ತಾದ ದೊಡ್ಡ ದುರ್ಗಾ ಪೂಜಾ ಸಮಿತಿಯ ಮುಖ್ಯಸ್ಥ ಎಂದು ತನ್ನನ್ನು ತಾನು ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆಯನ್ನು ತನ್ನ ಮತ್ತೋರ್ವ ಸ್ನೇಹಿತ ದೀಪ್‌ಗೆ ಪರಿಚಯ ಮಾಡಿಕೊಟ್ಟಿದ್ದಯ ಮೂವರು ಪರಸ್ಪರ ಸಂಪರ್ಕದಲ್ಲಿದ್ದರು. ಪೂಜಾ ಸಮಿತಿಯಲ್ಲಿ ಆಕೆಯನ್ನು ತೊಡಗಿಸಿಕೊಳ್ಳುವುದಾಗಿ ಇಬ್ಬರು ಆರೋಪಿಗಳು ಭರವಸೆ ನೀಡಿದ್ದರು ಎಂದು ಅವರು ದೂರಿನಲ್ಲಿ ಸಂತ್ರಸ್ಥೆ ತಿಳಿಸಿದ್ದಾರೆ.