ಭೋಪಾಲ್: ರೂ.183.21 ಕೋಟಿ ರೂ. ನಕಲಿ ಬ್ಯಾಂಕ್ ಗ್ಯಾರಂಟಿ ಹಗರಣಕ್ಕೆ ಸಂಬಂಧಿಸಿದಂತೆ, ಇಂದೋರ್ ಮೂಲದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಸೇರಿದಂತೆ ಇಬ್ಬರನ್ನು ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಬಂಧಿಸಿದೆ.
ತೀರ್ಥ್ ಗೋಪಿಕಾನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಕುಂಭಾನಿ ಮತ್ತು ಗೌರವ್ ಧಕಾಡ್ ಅವರನ್ನು ಸೋಮವಾರ ಸಿಬಿಐ ಬಂಧಿಸಿದೆ. ಈ ಇಬ್ಬರನ್ನು ಮಂಗಳವಾರ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಕೇಂದ್ರ ತನಿಖಾ ಸಂಸ್ಥೆ ಕೋಲ್ಕತ್ತಾದ ಮೂವರು ವ್ಯಕ್ತಿಗಳನ್ನು ಇದೇ ಪ್ರಕರಣಗಳಲ್ಲಿ ಬಂಧಿಸಿದ ಮೂರು ತಿಂಗಳ ನಂತರ ಈಗ ಮತ್ತೆ ಇಬ್ಬರನ್ನು ಬಂಧಿಸಿದೆ.
ಜೂನ್‌ನಲ್ಲಿ, ರೂ.183.21 ಕೋಟಿ ರೂ. ನಕಲಿ ಬ್ಯಾಂಕ್ ಗ್ಯಾರಂಟಿ ಹಗರಣಕ್ಕೆ ಸಂಬಂಧಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಗೋವಿಂದ್ ಚಂದ್ರ ಹನ್ಸ್‌ಡಾ ಮತ್ತು ಮೊಹಮ್ಮದ್ ಫಿರೋಜ್ ಖಾನ್ ಸೇರಿದಂತೆ ಮೂವರನ್ನು ಸಿಬಿಐ ಬಂಧಿಸಿತ್ತು.
ಇದಕ್ಕೂ ಮೊದಲು, ಮಧ್ಯಪ್ರದೇಶ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ, ಸಿಬಿಐ, ಇಂದೋರ್ ಮೂಲದ ತೀರ್ಥ್ ಗೋಪಿಕಾನ್ ಲಿಮಿಟೆಡ್, ಎಂಪಿ ಜಲ ನಿಗಮ್ ಲಿಮಿಟೆಡ್(ಎಂಪಿಜೆಎನ್‌ಎಲ್) ನಿಂದ 974 ಕೋಟಿ ರೂ. ಮೌಲ್ಯದ ಒಪ್ಪಂದಗಳನ್ನು ಪಡೆಯಲು ಎಂಟು ನಕಲಿ ಬ್ಯಾಂಕ್ ಗ್ಯಾರಂಟಿಗಳನ್ನು ಸಲ್ಲಿಸಿದ್ದಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳನ್ನು ದಾಖಲಿಸಿತ್ತು.
2023 ರಲ್ಲಿ, ಕಂಪನಿಯು ಮಧ್ಯಪ್ರದೇಶದ ಛತ್ತರ್‌ಪುರ, ಸಾಗರ್ ಮತ್ತು ದಿಂಡೋರಿ ಜಿಲ್ಲೆಗಳಲ್ಲಿ ಒಟ್ಟು 974 ಕೋಟಿ ರೂ. ಮೌಲ್ಯದ ಮೂರು ನೀರಾವರಿ ಯೋಜನೆಗಳ ಗುತ್ತಿಗೆ ಪಡೆದುಕೊಂಡಿತ್ತು. ಈ ಒಪ್ಪಂದಗಳನ್ನು ಪಡೆಯಲು ಕಂಪನಿಯು 183.21 ಕೋಟಿ ರೂ. ಮೌಲ್ಯದ ಎಂಟು ನಕಲಿ ಬ್ಯಾಂಕ್ ಗ್ಯಾರಂಟಿಗಳನ್ನು ಸಲ್ಲಿಸಿತ್ತು. ಈ ನಕಲಿ ಗ್ಯಾರಂಟಿಗಳ ಆಧಾರದ ಮೇಲೆ, ಅದು ಎಂಪಿಜೆಎನ್‌ಎಲ್‌ನಿಂದ ಸುಮಾರು 85 ಕೋಟಿ ರೂ.ಗಳನ್ನು ಮುಂಗಡವಾಗಿ ಪಡೆದುಕೊಂಡಿತ್ತು.