ಕಠ್ಮಂಡು: ನೇಪಾಳ ಸರ್ಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ ವಿರುದ್ಧ ಯುವ ಸಮುದಾಯ ಸಿಡಿದೆದಿದ್ದು, ಹಿಂಸಾಚಾರದಿಂದ ದೇಶ ತತ್ತರಿಸಿದೆ. ಈಗ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿರುವಂತೆಯೇ ವಯಸ್ಸಾದ ನಾಯಕರಿಂದ ಬೇಸತ್ತು ನಾವು ಈ ಪ್ರತಿಭಟನೆ ಮಾಡಿದ್ದೇವೆ ಎಂದು Gen-Z ನಾಯಕ ಅನಿಲ್ ಬನಿಯಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದೆವು. ಆದರೆ ರಾಜಕೀಯ ಕಾರ್ಯಕರ್ತರು ಬೆಂಕಿ ಹಚ್ಚಿ ನಂತರ ಸರ್ಕಾರಿ ಕಟ್ಟಡಗಳನ್ನು ಧ್ವಂಸಗೊಳಿಸಿದ್ದಾರೆ. ಆನ್‌ಲೈನ್ ಸಮೀಕ್ಷೆಗಳ ಮೂಲಕ Gen-Z ನಾಯಕರು ಸುಶೀಲಾ ಕರ್ಕಿ ಅವರಿಗೆ ವೋಟ್ ಮಾಡಿದ್ದಾರೆ.
ಆದರೆ ನಾವು ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುವುದಿಲ್ಲ. ಆದರೆ ಅದರಲ್ಲಿ ಅಗತ್ಯ ಬದಲಾವಣೆ ಅಗತ್ಯವಾಗಿದೆ. ಆರು ತಿಂಗಳೊಳಗೆ ಚುನಾವಣೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.
Gen-Z ಮತ್ತೋರ್ವ ನಾಯಕ ದಿವಾಕರ್ ದಂಗಲ್ ಮಾತನಾಡಿ, ನಮಗೆ ನಾಯಕತ್ವ ವಹಿಸುವ ಸಾಮರ್ಥ್ಯ ಇಲ್ಲ. ನಾಯಕತ್ವ ವಹಿಸುವಷ್ಟು ಪ್ರಬುದ್ಧರಾಗಲು ಸಮಯ ಬೇಕು. ನಮ್ಮನ್ನು ಒಡೆಯುವ ಯತ್ನಗಳು ನಡೆಯುತ್ತಿವೆ. ಈ ರಕ್ತಪಾತಕ್ಕೆ ವಯಸ್ಸಾದ ನಾಯಕರೇ ಕಾರಣ, ಒಂದು ವೇಳೆ ಜನರು ರಕ್ತಪಾತ ಆರಂಭಿಸಿದರೆ ಅವರು ಉಳಿಯುವುದಿಲ್ಲ. ನಮಗೆ ರಕ್ತಪಾತ ಬೇಕಾಗಿಲ್ಲ. ಸಂಸತ್ತನ್ನು ವಿಸರ್ಜಿಸಬೇಕಾಗಿದೆ. ಆದರೆ, ಸಂವಿಧಾನವನ್ನು ರದ್ದುಗೊಳಿಸಬಾರದು ಎಂದರು.
Gen-Z ಪ್ರತಿಭಟನಾ ನಾಯಕರು ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನ ಮಂತ್ರಿ ಸ್ಥಾನಕ್ಕೆ ತಮ್ಮ ಸರ್ವಾನುಮತದ ನಾಮನಿರ್ದೇಶಿತರಾಗಿ ಆಯ್ಕೆ ಮಾಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಹಿಮಾಲಯನ್ ಪೋಸ್ಟ್ ವರದಿ ಮಾಡಿದೆ.
ಕರ್ಕಿ ಅವರ ತಂಡ ಮತ್ತು ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ಸೇರಿದಂತೆ ಸೇನಾ ನಾಯಕತ್ವದ ನಡುವೆ ಮಾತುಕತೆ ಪ್ರಾರಂಭವಾಗಲಿದ್ದು, ಪರಿಸ್ಥಿತಿ ಆಧಾರದ ಮೇಲೆ ಶೀತಲ್ ನಿವಾಸ್‌ನಲ್ಲಿರುವ ಅಧ್ಯಕ್ಷರ ಕಚೇರಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಕಠ್ಮಂಡು ಮೆಟ್ರೋಪಾಲಿಟನ್ ಸಿಟಿ ಮೇಯರ್ ಬಾಲೇಂದ್ರ ಷಾ 'ಬಾಲೆನ್' ಕೂಡ ಕರ್ಕಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.