ಮುಂಬೈ: ಸುಂಕದ ವಿವಾದ, ರಷ್ಯಾದ ತೈಲ ಖರೀದಿಯ ಮೇಲಿನ ಒತ್ತಡದ ನಡುವೆ ಮಂಗಳವಾರ ಭಾರತ ಮತ್ತು ಅಮೆರಿಕ ನವದೆಹಲಿಯಲ್ಲಿ ವ್ಯಾಪಾರ ಮಾತುಕತೆಗಳನ್ನು ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದು ಉಭಯ ದೇಶಗಳು ಸುಂಕದ ವಿವಾದವನ್ನು ಪರಿಹರಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ. ವಿಶ್ವದ ಅತ್ಯಂತ ಜನಸಂಖ್ಯೆ ಹೊಂದಿರುವ ದೇಶವು ಪ್ರಸ್ತುತ ತನ್ನ ಹೆಚ್ಚಿನ ರಫ್ತುಗಳ ಮೇಲೆ ಅಮೆರಿಕದ ತೀವ್ರ ಸುಂಕಗಳನ್ನು ಎದುರಿಸುತ್ತಿದೆ. ಈ ಹೊರೆಯನ್ನು ಕಡಿಮೆ ಮಾಡುವ ವ್ಯಾಪಾರ ಒಪ್ಪಂದಕ್ಕೆ ಬರಲು ಇದುವರೆಗೆ ವಿಫಲವಾಗಿದೆ.
ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸುವ ಸಲುವಾಗಿ ರಷ್ಯಾ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ಸುಂಕ ಸಮರ ನಡೆಸಿದ್ದಾರೆ. ರಷ್ಯಾದ ತೈಲ ಖರೀದಿಯನ್ನು ಮುಂದುವರೆಸಿದ್ದಕ್ಕೆ ಪ್ರತೀಕಾರವಾಗಿ ಕಳೆದ ತಿಂಗಳು ಭಾರತದ ಮೇಲಿನ ಸುಂಕವನ್ನು ಶೇಕಡಾ 50ಕ್ಕೆ ಹೆಚ್ಚಿಸಿದ್ದು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಹದಗೆಡಿಸಿದೆ. ಇದರ ಮಧ್ಯೆಯೇ ಉಭಯ ದೇಶಗಳ ನಾಯಕರು ಇತ್ತೀಚೆಗೆ ನಿರಂತರ ಮಾತುಕತೆಗಳಿಗೆ ಬದ್ಧರಾಗಿದ್ದೇವೆ ಎಂದು ಹೇಳಿದ್ದರು.
ನಾಳಿನ ಮಾತುಕತೆಯಲ್ಲಿ ಅಧಿಕಾರಿಗಳು ವ್ಯಾಪಾರದ ಕುರಿತು ಆಂತರಿಕ ಚರ್ಚೆಗಳನ್ನು ನಡೆಸಲಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ. ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ವ್ಯಾಪಾರ ಪ್ರತಿನಿಧಿ ಬ್ರೆಂಡನ್ ಲಿಂಚ್ ಅವರು ಅಮೆರಿಕದ ನಿಯೋಗದ ಭಾಗವಾಗಲಿದ್ದಾರೆ. ನವದೆಹಲಿ ಮತ್ತು ವಾಷಿಂಗ್ಟನ್ ನಡುವೆ ವ್ಯಾಪಾರ ಅಡೆತಡೆಗಳನ್ನು ಪರಿಹರಿಸಲು ಮಾತುಕತೆ ಮುಂದುವರಿಯುತ್ತದೆ ಎಂದು ಟ್ರಂಪ್ ಘೋಷಿಸಿದ ಒಂದು ವಾರದ ನಂತರ ಈ ಚರ್ಚೆಗಳು ನಡೆಯುತ್ತಿವೆ.
ನಮ್ಮ ಎರಡೂ ಮಹಾನ್ ದೇಶಗಳಿಗೆ ಯಶಸ್ವಿ ತೀರ್ಮಾನಕ್ಕೆ ಬರಲು ಯಾವುದೇ ತೊಂದರೆ ಇರುವುದಿಲ್ಲ ಎಂದು ನನಗೆ ಖಚಿತವಾಗಿದೆ! ಎಂದು ಡೋನಾಲ್ಡ್ ಟ್ರಂಪ್ ಕಳೆದ ವಾರ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್‌ನಲ್ಲಿ ಹೆಚ್ಚಿನ ವಿವರಗಳನ್ನು ನೀಡದೆ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಎರಡೂ ರಾಷ್ಟ್ರಗಳು "ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು" ಮತ್ತು ಅಧಿಕಾರಿಗಳು "ಸಾಧ್ಯವಾದಷ್ಟು ಬೇಗ" ಚರ್ಚೆಗಳನ್ನು ಮುಕ್ತಾಯಗೊಳಿಸಲು ಕೆಲಸ ಮಾಡುತ್ತವೆ ಎಂದು ಹೇಳಿದರು.