ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. X ನಲ್ಲಿ ಪೋಸ್ಟ್ ಮಾಡಿರುವ ಜಾರ್ಜಿಯಾ ಮೆಲೋನಿ, ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ದೃಷ್ಟಿಕೋನವನ್ನು ಶ್ಲಾಘಿಸಿದ್ದಾರೆ. ಅವರ "ಶಕ್ತಿ, ದೃಢನಿಶ್ಚಯ ಮತ್ತು ಲಕ್ಷಾಂತರ ಜನರನ್ನು ಮುನ್ನಡೆಸುವ ಸಾಮರ್ಥ್ಯ" ಸ್ಫೂರ್ತಿಯ ಮೂಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂದೇಶದೊಂದಿಗೆ ಒಟ್ಟಿಗೆ ಕ್ಲಿಕಿಸಿರುವ ಸೆಲ್ಫಿಯನ್ನೂ ಮೆಲೋನಿ ಹಂಚಿಕೊಂಡಿದ್ದಾರೆ. ಈ ಫೋಟೋ ಇಬ್ಬರು ನಾಯಕರ ನಡುವಿನ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.
“ಭಾರತೀಯ ಪ್ರಧಾನಿ Narendra Modi ಅವರಿಗೆ 75 ನೇ ಹುಟ್ಟುಹಬ್ಬದ ಶುಭಾಶಯಗಳು. ಅವರ ಶಕ್ತಿ, ದೃಢನಿಶ್ಚಯ ಮತ್ತು ಲಕ್ಷಾಂತರ ಜನರನ್ನು ಮುನ್ನಡೆಸುವ ಅವರ ಸಾಮರ್ಥ್ಯವು ಸ್ಫೂರ್ತಿಯ ಮೂಲವಾಗಿದೆ. ಸ್ನೇಹ ಮತ್ತು ಗೌರವದಿಂದ, ಭಾರತವನ್ನು ಉಜ್ವಲ ಭವಿಷ್ಯದತ್ತ ಮುನ್ನಡೆಸುವುದನ್ನು ಮುಂದುವರಿಸಲು ಮತ್ತು ನಮ್ಮ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾನು ಅವರಿಗೆ ಆರೋಗ್ಯ ಮತ್ತು ಶಕ್ತಿಯನ್ನು ಬಯಸುತ್ತೇನೆ.” ಎಂದು ಹೇಳಿದ್ದಾರೆ. ಹಲವಾರು ಇತರ ವಿಶ್ವ ನಾಯಕರು ಪ್ರಧಾನಿ ಮೋದಿ ಅವರ 75 ನೇ ಹುಟ್ಟುಹಬ್ಬದಂದು ಶುಭಾಶಯಗಳನ್ನು ಕೋರಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ಕರೆಯ ಸಮಯದಲ್ಲಿ, ನಾಯಕರು ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು ಮತ್ತು ಭಾರತ-ಯುಎಸ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದಾಗಿ ಹೇಳಿದ್ದಾರೆ.
“ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅದ್ಭುತವಾದ ಫೋನ್ ಸಂಭಾಷಣೆ ನಡೆಸಿದೆ. ನಾನು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ! ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ನರೇಂದ್ರ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ನಿಮ್ಮ ಬೆಂಬಲಕ್ಕೆ ಧನ್ಯವಾದಗಳು! ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ನನ್ನ ಸ್ನೇಹಿತ ಅಧ್ಯಕ್ಷ ಟ್ರಂಪ್, ನನ್ನ 75 ನೇ ಹುಟ್ಟುಹಬ್ಬದಂದು ನಿಮ್ಮ ಫೋನ್ ಕರೆ ಮತ್ತು ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಪ್ರಧಾನಿ ಮೋದಿ ಅವರನ್ನು “ಸ್ನೇಹಿತ” ಎಂದು ಕರೆದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಭಾರತದೊಂದಿಗೆ ಬಲವಾದ ಬಾಂಧವ್ಯವನ್ನು ಹಂಚಿಕೊಳ್ಳಲು ಹೆಮ್ಮೆಪಡುತ್ತೇನೆ ಮತ್ತು ದೇಶದಲ್ಲಿ ಭಾರತೀಯ ಸಮುದಾಯದ ಗಮನಾರ್ಹ ಕೊಡುಗೆಗಳನ್ನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊ ಸಂದೇಶದ ಮೂಲಕ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.