ಇಂದು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು 75 ವಸಂತಗಳನ್ನು ಪೂರೈಸಿ 76 ವರ್ಷಕ್ಕೆ ಕಾಲಿಟ್ಟಿದ್ದಾರೆ. ಹಲವಾರು ಗಣ್ಯರು ಮತ್ತು ರಾಜಕಾರಣಿಗಳು ಅವರ ನಾಯಕತ್ವವನ್ನು ಶ್ಲಾಘಿಸುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ ತನ್ನ ಪ್ರಮುಖ ನಾಯಕನ ಜನ್ಮದಿನವನ್ನು ಗುರುತಿಸಲು ಹದಿನೈದು ವಾರಗಳ ಕಾಲ "ಸೇವಾ ಪಾಕ್ಷಿಕ"ಅಭಿಯಾನವನ್ನು ಆರಂಭಿಸಿದೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಅಕ್ಟೋಬರ್ 2 ರವರೆಗೆ ದೇಶಾದ್ಯಂತ ಆರೋಗ್ಯ ಶಿಬಿರಗಳಿಂದ ಹಿಡಿದು ಸ್ವಚ್ಛತಾ ಅಭಿಯಾನ, ಬುದ್ಧಿಜೀವಿಗಳ ಸಭೆಗಳು ಮತ್ತು ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಮೇಳಗಳವರೆಗೆ ಹಲವಾರು ಪ್ರಚಾರ, ಕಲ್ಯಾಣ, ಅಭಿವೃದ್ಧಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿವೆ.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಪೋಷಣೆಯ ಮೇಲೆ ಕೇಂದ್ರೀಕರಿಸುವ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲು ಪ್ರಧಾನಿ ಮೋದಿಯವರೇ ಸ್ವತಃ ಮಧ್ಯಪ್ರದೇಶದ ಧಾರ್‌ಗೆ ಪ್ರಯಾಣಿಸುತ್ತಿದ್ದಾರೆ. ಬುಡಕಟ್ಟು ಜನಸಂಖ್ಯೆಯ ಮೇಲೆ ಕೇಂದ್ರೀಕರಿಸಿದ ಹಲವಾರು ಇತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅವರು ಪ್ರಾರಂಭಿಸಲಿದ್ದಾರೆ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿದಂತೆ ರಾಜಕೀಯ ನಾಯಕರಿಂದ ಶುಭಾಶಯ
ಗುಜರಾತ್‌ನ ವಡ್ನಗರದ ಬಡ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದನೆ ಸಲ್ಲಿಸಿದ್ದು, ದೇಶದಲ್ಲಿ ಉತ್ತಮ ಗುರಿಗಳನ್ನು ಹೊಂದಿಸುವ ಮತ್ತು ಸಾಧಿಸುವ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಕ್ಕಾಗಿ ಶ್ಲಾಘಿಸಿದ್ದಾರೆ.
"ಇಂದು, ಜಾಗತಿಕ ಸಮುದಾಯವು ನಿಮ್ಮ ಮಾರ್ಗದರ್ಶನದಲ್ಲಿ ತನ್ನ ನಂಬಿಕೆಯನ್ನು ವ್ಯಕ್ತಪಡಿಸುತ್ತಿದೆ" ಎಂದು ರಾಷ್ಟ್ರಪತಿ ಮುರ್ಮು ಪ್ರಧಾನಿಗೆ ತಮ್ಮ ಹುಟ್ಟುಹಬ್ಬದ ಶುಭಾಶಯಗಳಲ್ಲಿ ತಿಳಿಸಿದ್ದಾರೆ.
ಅವರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, ತಮ್ಮ ಸರ್ಕಾರವು 140 ಕೋಟಿಗೂ ಹೆಚ್ಚು ನಾಗರಿಕರ ಸಹಾಯದಿಂದ ಬಲವಾದ, ಸಮರ್ಥ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಮರ್ಪಿತವಾಗಿರುತ್ತದೆ ಎಂದು ಹೇಳಿದರು ಮತ್ತು ಅವರ ದೃಷ್ಟಿಕೋನ ಮತ್ತು ಆಲೋಚನೆಗಳನ್ನು ಸ್ಪೂರ್ತಿದಾಯಕವೆಂದು ಬಣ್ಣಿಸಿದರು.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಭಾರತವು ಜಾಗತಿಕ ವೇದಿಕೆಯಲ್ಲಿ ಒಂದು ಛಾಪು ಮೂಡಿಸುತ್ತಿದೆ. ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿಯತ್ತ ಸ್ಥಿರವಾಗಿ ಸಾಗುತ್ತಿದೆ ಎಂದು ಹೇಳಿದರು.
ಸ್ಪೀಕರ್ ಓಂ ಬಿರ್ಲಾ ಅವರು ದೇಶಕ್ಕಾಗಿ ಅವರ ಅಪ್ರತಿಮ ಸಮರ್ಪಣೆ ಮತ್ತು ಬದ್ಧತೆಯು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಗೃಹ ಸಚಿವ ಅಮಿತ್ ಶಾ, ಮೋದಿ ಐದು ದಶಕಗಳಿಗೂ ಹೆಚ್ಚು ಕಾಲ ಜನರ ಕಲ್ಯಾಣಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ. ಅವರು ಪ್ರತಿಯೊಬ್ಬ ನಾಗರಿಕರಿಗೂ 'ರಾಷ್ಟ್ರ ಮೊದಲು' ಎಂಬ ಧ್ಯೇಯವಾಕ್ಯದ ಜೀವಂತ ಸ್ಫೂರ್ತಿ ಎಂದು ಹೇಳಿದರು.
ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅಮಿತ್ ಶಾ, ತ್ಯಾಗ ಮತ್ತು ಸಮರ್ಪಣೆಯ ಸಂಕೇತ ಮತ್ತು ಕೋಟ್ಯಂತರ ದೇಶವಾಸಿಗಳಿಗೆ ಸ್ಫೂರ್ತಿ ಎಂದು ಬಣ್ಣಿಸಿದ್ದಾರೆ.
ಸಮಾಜದ ಪ್ರತಿಯೊಂದು ವರ್ಗದ ಪ್ರಗತಿಯ ಗುರಿಯೊಂದಿಗೆ 'ಆತ್ಮನಿರ್ಭರ ಮತ್ತು ವಿಕಸಿತ ಭಾರತ'ವನ್ನು ನಿರ್ಮಿಸಲು ಪ್ರಧಾನಿ ಮೋದಿ ಅನೇಕ ಪರಿವರ್ತನಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಶ್ಲಾಘಿಸಿದ್ದಾರೆ.
ಅವರ ನಾಯಕತ್ವದಲ್ಲಿ, ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಜಾಗತಿಕ ಪ್ರತಿಷ್ಠೆಯನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮೋದಿ ಅವರನ್ನು ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂದು ಬಣ್ಣಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ಸ್ವಾವಲಂಬಿ ಮತ್ತು 'ವಿಶ್ವಗುರು' ಆಗಲಿ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲಿ ಎಂದು ಆಶಿಸಿದ್ದಾರೆ.
ಆರ್‌ಎಸ್‌ಎಸ್‌ನಿಂದ ಪಕ್ಷ ಮತ್ತು ಸರ್ಕಾರದವರೆಗೆ, ಮೋದಿಯ ಜೀವನ ಪ್ರಯಾಣವು ವ್ಯಾಪಕ ಪರಿವರ್ತನೆಗಳ ಸಾಧ್ಯತೆಯನ್ನು ತೋರಿಸುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
"ಕೋಟ್ಯಂತರ ನಾಗರಿಕರ ಜೀವನದಲ್ಲಿ ಊಹಿಸಲಾಗದ ಬದಲಾವಣೆಗಳನ್ನು ತಂದ, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಪ್ರಯಾಣಕ್ಕೆ ಅವರನ್ನು ಸಂಪರ್ಕಿಸಿರುವ ಮೋದಿಯವರ ಬಗ್ಗೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ" ಎಂದು ಹೇಳಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ, ಆರ್‌ಎಸ್‌ಎಸ್ ಪ್ರಚಾರಕರಾಗಿ, ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ, ಗುಜರಾತ್ ಮುಖ್ಯಮಂತ್ರಿಯಾಗಿ, ಕಳೆದ 11 ವರ್ಷಗಳಿಂದ ದೇಶದ ಪ್ರಧಾನ ಮಂತ್ರಿಯಾಗಿ ವಿವಿಧ ಪಾತ್ರಗಳಲ್ಲಿ ಮೋದಿಯವರನ್ನು ಗಮನಿಸುವ ಅವಕಾಶ ತಮಗೆ ಸಿಕ್ಕಿದೆ ಎಂದು ಶಾ ಹೇಳಿದ್ದಾರೆ.
"ಮೋದಿ ಯಾವಾಗಲೂ ರಾಷ್ಟ್ರ ಮೊದಲು ನಂತರ ನಾವು ಎನ್ನುವವರು. ನನ್ನಂತಹ ಕಾರ್ಯಕರ್ತರು ತಾವು ಕೈಗೊಂಡ ಪ್ರತಿಯೊಂದು ಪಾತ್ರದಲ್ಲೂ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಅದೃಷ್ಟ" ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಪ್ರಧಾನಿ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಖರ್ಗೆ"ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ" ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ, "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಅವರಿಗೆ ದೀರ್ಘ ಆರೋಗ್ಯವನ್ನು ಹಾರೈಸುತ್ತೇನೆ" ಎಂದು ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಪ್ರಧಾನಿ ಮೋದಿ ಯಾವಾಗಲೂ ದೆಹಲಿ ಪರವಾಗಿದ್ದಾರೆ. ಕಳೆದ 11 ವರ್ಷಗಳಲ್ಲಿ ನಗರದ ಅಗತ್ಯಗಳನ್ನು ನೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಹುಟ್ಟುಹಬ್ಬದ ಶುಭಾಶಯಗಳಲ್ಲಿ, ಪ್ರಧಾನಿ ಮೋದಿ ಅವರನ್ನು 1.4 ಶತಕೋಟಿ ಭಾರತೀಯರ ಭರವಸೆ ಮತ್ತು ಆಕಾಂಕ್ಷೆಗಳ ಪಥದರ್ಶಕ ಎಂದು ಬಣ್ಣಿಸಿದ್ದಾರೆ.
ಮೋದಿಯವರ "ಅಪ್ರತಿಮ" ದೃಢನಿಶ್ಚಯ, ಸೂಕ್ಷ್ಮ ನಾಯಕತ್ವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಕ್ಕೆ ಅಚಲವಾದ ಸಮರ್ಪಣೆ ಮತ್ತು ಸಾರ್ವಜನಿಕ ಕಲ್ಯಾಣದ ಮನೋಭಾವವು 'ನವ ಭಾರತ'ವನ್ನು ಭರವಸೆ, ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆಯ ಹೊಸ ಎತ್ತರಕ್ಕೆ ಏರಿಸಿದೆ ಎಂದಿದ್ದಾರೆ.
ವಿರೋಧ ಪಕ್ಷದ ನಾಯಕ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪ್ರಧಾನಿಗೆ "ಆರೋಗ್ಯಕರ, ಅರ್ಥಪೂರ್ಣ, ಸಾಮರಸ್ಯ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಕಾರಾತ್ಮಕ" ಜೀವನವನ್ನು ಹಾರೈಸಿದರು.
ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಅವರು ಪ್ರಧಾನಿಯ ಹುಟ್ಟುಹಬ್ಬದಂದು ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ಕೋರಿದರು.
ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರು ಪ್ರಧಾನಿ ಮೋದಿಯವರ ಅಧಿಕಾರಾವಧಿಯನ್ನು ಭಾರತವನ್ನು ಜಾಗತಿಕ ಶಕ್ತಿಯಾಗಿ ಸ್ಥಾನೀಕರಿಸಿದ ಪರಿವರ್ತನಾ ಅವಧಿ ಎಂದು ಬಣ್ಣಿಸಿದ್ದಾರೆ. ವೀಡಿಯೊ ಸಂದೇಶದಲ್ಲಿ, ಬಿಜೆಪಿ ಸಂಸದರು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಮೋದಿಯವರ ದೃಷ್ಟಿಕೋನವು ದೇಶಾದ್ಯಂತ ನಾಗರಿಕರನ್ನು ಸಬಲೀಕರಣಗೊಳಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಿಂದಿಕ್ಕಿ ಬೆಳೆದ ಬಿಜೆಪಿ
ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ನಂತರ ಭಾರತದ ಮೂರನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ ಮೋದಿ ನಿರಂತರ ಅಧಿಕಾರಾವಧಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 80 ರ ದಶಕದ ಉತ್ತರಾರ್ಧದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಅವರ ಉಭಯ ನಾಯಕತ್ವದಲ್ಲಿ ಬಿಜೆಪಿ ಕಾಂಗ್ರೆಸ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದ್ದರೆ, 2014 ರಲ್ಲಿ ಮೋದಿ ತಮ್ಮ ಪಕ್ಷವನ್ನು ತನ್ನ ಮೊದಲ ಲೋಕಸಭಾ ಬಹುಮತಕ್ಕೆ ಕರೆದೊಯ್ದ ನಂತರ ಜನಪ್ರಿಯ ಬೆಂಬಲ ಮತ್ತು ಸಮೀಕ್ಷೆಯ ಪ್ರಾಬಲ್ಯದಲ್ಲಿ ಕಾಂಗ್ರೆಸ್ ನ್ನು ಹಿಂದಿಕ್ಕಿತು.
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಲ್ಪ ಮಟ್ಟಿಗೆ ಸೋತರೂ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಪ್ರಭಾವಶಾಲಿ ವಿಜಯಗಳನ್ನು ಗಳಿಸುವ ಮೂಲಕ ಮೋದಿ ನೇತೃತ್ವದಲ್ಲಿ ತನ್ನ ಗೆಲುವನ್ನು ಮರಳಿ ಪಡೆಯಿತು.
11 ವರ್ಷಗಳಿಂದ ದೇಶ, ಪಕ್ಷವನ್ನು ಮುನ್ನಡೆಸುತ್ತಿರುವ ಮೋದಿ
2014 ರಿಂದ ಬಿಜೆಪಿ ಪಕ್ಷದ ಅಭೂತಪೂರ್ವ ಭೌಗೋಳಿಕ ವಿಸ್ತರಣೆ ಮತ್ತು ಚುನಾವಣಾ ಯಶಸ್ಸಿನತ್ತ ಕೊಂಡೊಯ್ದ ಮೋದಿಯವರಿಗೆ ಬಿಜೆಪಿ ನಾಯಕರು, ಮಿತ್ರಪಕ್ಷಗಳು ಮತ್ತು ಇತರ ಪಕ್ಷಗಳ ಸದಸ್ಯರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೋದಿ ಅವರ ದೂರದೃಷ್ಟಿಯ ನಾಯಕತ್ವ, ರಾಷ್ಟ್ರಕ್ಕಾಗಿ ಸಮರ್ಪಣೆ ಮತ್ತು ಅವಿಶ್ರಾಂತ ಕಠಿಣ ಪರಿಶ್ರಮದಿಂದ ದೇಶಕ್ಕೆ ಹೊಸ ಶಕ್ತಿಯನ್ನು ನೀಡಿದೆ ಮತ್ತು ಅದಕ್ಕೆ ಹೊಸ ದಿಕ್ಕನ್ನು ತೋರಿಸಿದೆ ಎಂದು ಹೇಳಿದ್ದಾರೆ.
ಮೋದಿಯವರು ಜಾಗತಿಕ ಮಟ್ಟದಲ್ಲಿ ಭಾರತದ ಸಾಮರ್ಥ್ಯ ಮತ್ತು ಗೌರವವನ್ನು ಹೆಚ್ಚಿಸಿದ್ದಾರೆ. ಜನರ ವಿಶೇಷವಾಗಿ ಬಡವರ ಕಲ್ಯಾಣಕ್ಕಾಗಿ ಅವರ ಬದ್ಧತೆ ಅನುಕರಣೀಯವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.