ಮುಂಬೈ: ಅತಿವೇಗವಾಗಿ ಬಂದ ಲ್ಯಾಂಬೋರ್ಘಿನಿ ಕಾರೊಂದು ಮುಂಬೈನ ಕರಾವಳಿ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
ಭಾನುವಾರ ಬೆಳಗ್ಗೆ ನಡೆದ ಈ ಘಟನೆಯಲ್ಲಿ ಸ್ಪೋರ್ಟ್ಸ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ವೀಡಿಯೋ ನಂತರ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನಗರದಲ್ಲಿ ಮಳೆಯಿಂದ ಒದ್ದೆಯಾದ ರಸ್ತೆ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. 52 ವರ್ಷದ ಚಾಲಕ ಅತಿಶ್ ಷಾ ಎಂಬಾತ ನಿಯಂತ್ರಣ ಕಳೆದುಕೊಂಡ ಪರಿಣಾಮವಾಗಿ ಕಾರು ರಸ್ತೆಯಲ್ಲಿ ಸ್ಕಿಡ್ ಆಗಿ ಡಿವೈಡರ್‌ಗೆ ಗುದ್ದಿದೆ ಎಂದು ಅವರು ಹೇಳಿದರು.
ನೇಪಿಯನ್ ಸಮುದ್ರ ರಸ್ತೆಯಲ್ಲಿ ತಂಗಿರುವ ಶಾ, ದಕ್ಷಿಣ ಮುಂಬೈನ ಕೊಲಾಬಾಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾರಿನ ಮುಂಭಾಗ ಜಖಂಗೊಂಡಿದೆ. ಹಾನಿಗೊಳಗಾದ ಕಾರನ್ನು ನಂತರ ರಸ್ತೆಯಿಂದ ದೂರಕ್ಕೆ ಎಳೆಯಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಯಾವುದೇ ತಾಂತ್ರಿಕ ದೋಷವಿದ್ದಲ್ಲಿ ಕಾರನ್ನು ಪರಿಶೀಲಿಸುವಂತೆ ವರ್ಲಿ ಪೊಲೀಸರು ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಸೂಚಿಸಿದ್ದಾರೆ.
ಈ ಕಾರುಗಳ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ರೇಮಂಡ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ಭಾನುವಾರ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಅಪಘಾತದ ವೀಡಿಯೊವನ್ನು ಹಂಚಿಕೊಂಡಿದ್ದು, ಅಪಘಾತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.