ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಸೇರಿದಂತೆ ವಿಶ್ವ ನಾಯಕರೊಂದಿಗಿನ ಸಂಬಂಧವನ್ನು ಎತ್ತಿ ತೋರಿಸಿರುವ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವ ಸಾಮರ್ಥ್ಯವಿದೆ ಎಂದು ಸೋಮವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಎರಡು ಭಾಷಣಗಳ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕ ಭಾರತದ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ್ದರೂ, ಟ್ರಂಪ್ ಯಾವಾಗಲೂ ಮೋದಿ ಅವರನ್ನು ತಮ್ಮ ಉತ್ತಮ ಸ್ನೇಹಿತ ಎಂದೇ ಶ್ಲಾಘಿಸಿದ್ದಾರೆ. ಅದೇ ರೀತಿ, ಚೀನಾ ಅಧ್ಯಕ್ಷ ಕ್ಸಿ ಕೂಡ 'ಅಂತರರಾಷ್ಟ್ರೀಯ ರಾಜಕೀಯದಲ್ಲಿನ ವ್ಯತ್ಯಾಸಗಳ ಹೊರತಾಗಿಯೂ' ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು.
ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಧಾಕೃಷ್ಣನ್, 'ಅಮೆರಿಕವು ಭಾರತದ ಮೇಲೆ ಶೇ 50 ರಷ್ಟು ಸುಂಕ ಹೇರಿದ್ದರೂ, ಟ್ರಂಪ್ ಯಾವಾಗಲೂ ಮೋದಿ ಜಿ ನನ್ನ ಉತ್ತಮ ಸ್ನೇಹಿತ ಎಂದು ಹೇಳುತ್ತಿದ್ದಾರೆ. ಆ ಪರಿಸ್ಥಿತಿಯಲ್ಲಿಯೂ ಸಹ, ಮೋದಿಯನ್ನು ವಿರೋಧಿಸುವುದಾಗಿ ಹೇಳಿಲ್ಲ. ಅವರು ಯಾವಾಗಲೂ ನಾನು ಮೋದಿ ಪರ ಎಂದು ಹೇಳುತ್ತಿದ್ದಾರೆ' ಎಂದರು.
ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ಪುಟಿನ್ ಅವರ ಆಪ್ತ ಮಿತ್ರರು. ಅದೇ ಸಮಯದಲ್ಲಿ, ಕ್ಸಿ ಕೂಡ ಮೋದಿ ಅವರ ಉತ್ತಮ ಮಿತ್ರರಾಗಿದ್ದಾರೆ. ನಾವು ಇಂದು ಅದನ್ನು ನೋಡಿದ್ದೇವೆ ಮತ್ತು ಅದಕ್ಕಾಗಿಯೇ ಅವರು ಅಸಾಧ್ಯ ಎನ್ನುವುದನ್ನು ಸಾಧ್ಯವಾಗಿಸುತ್ತಾರೆ. ಪ್ರಧಾನಿ ಜನಸಾಮಾನ್ಯರಿಗಾಗಿ ಶುದ್ಧ ಹೃದಯದಿಂದ ಕೆಲಸ ಮಾಡುತ್ತಾರೆ ಮತ್ತು ಪ್ರತಿಯಾಗಿ ಏನನ್ನೂ ನಿರೀಕ್ಷಿಸುವುದಿಲ್ಲ' ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭಾ ಉಪ ಸಭಾಪತಿ ಹರಿವಂಶ್, ಪ್ರಧಾನಿಯವರು ಜನರ ಭಾಷೆಯಲ್ಲಿ ಮಾತನಾಡುತ್ತಾರೆ ಮತ್ತು ಅವರ ಪರವಾಗಿ ಮಾತನಾಡುತ್ತಾರೆ ಎಂದು ಹೇಳಿದರು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಹಿಂದೆ ಸರ್ಕಾರಿ ಯೋಜನೆಗಳನ್ನು ಪ್ರಾರಂಭಿಸಿದಾಗ, ಅವು "ಬ್ಯಾಂಡ್ ಏಡ್" ಆಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರ, ಯೋಜನೆಗಳನ್ನು ದೊಡ್ಡ ಪ್ರಮಾಣದಲ್ಲಿ ಜನರಿಗೆ ತಲುಪುವ ಬಗ್ಗೆ ಅವರು ಮನಸ್ಥಿತಿಯನ್ನು ಬದಲಾಯಿಸಿದರು. ಮೋದಿ ರಾಜಕೀಯವನ್ನು ಸಾರ್ವಜನಿಕ ಸೇವೆಗಾಗಿ ಬಳಸುತ್ತಾರೆ ಮತ್ತು ಅವರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಸಮಾಜದ ಹಿತದೃಷ್ಟಿಯನ್ನು ಆಧರಿಸಿದೆ ಎಂದರು.