ಗುವಾಹಟಿ: ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗರ್ಗ್(52) ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಗುವಾಹಟಿ ಹೊರವಲಯದಲ್ಲಿರುವ ಕಾಮರ್ಕುಚಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಗರ್ಗ್ ಅವರ ಪಾರ್ಥಿವ ಶರೀರವನ್ನು ಇಂದು ಗುವಾಹಟಿಯ ಅರ್ಜುನ್ ಭೋಗೇಶ್ವರ್ ಬರುವಾ ಕ್ರೀಡಾ ಸಂಕೀರ್ಣದಿಂದ ಹೂವುಗಳಿಂದ ಅಲಂಕರಿಸಿದ ಆಂಬ್ಯುಲೆನ್ಸ್‌ನಲ್ಲಿ ಕಾಮರ್ಕುಚಿ ಗ್ರಾಮಕ್ಕೆ ತರಲಾಯಿತು.
ಗರ್ಗ್ ಅವರ ತಂದೆ, ಪತ್ನಿ ಗರಿಮಾ ಮತ್ತು ಇತರ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಅವರ ಅಂತಿಮಯಾತ್ರೆಯಲ್ಲಿ ಭಾಗವಹಿಸಿದ್ದರು. ಸಾವಿರಾರು ಅಭಿಮಾನಿಗಳು ಆಂಬ್ಯುಲೆನ್ಸ್ ಅನ್ನು ಹಿಂಬಾಲಿಸಿದರು.
ಇದಕ್ಕೂ ಮೊದಲು, ಅಸ್ಸಾಂ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಜನ ಭಾನುವಾರ ಮತ್ತು ಸೋಮವಾರ ನಗರದ ಸರುಸಜೈ ಕ್ರೀಡಾಂಗಣದಲ್ಲಿ ಗರ್ಗ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಅಂತಿಮ ವಿಧಿವಿಧಾನಗಳ ಸಂದರ್ಭದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಸರ್ಬಾನಂದ ಸೋನೋವಾಲ್, ಕಿರಣ್ ರಿಜಿಜು ಮತ್ತು ಪಬಿತ್ರ ಮಾರ್ಗರಿಟಾ, ಹಲವಾರು ಅಸ್ಸಾಂ ಸಚಿವರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು, ಗರ್ಗ್ ಅವರ ಎರಡನೇ ಮರಣೋತ್ತರ ಪರೀಕ್ಷೆಯನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಏಮ್ಸ್ ವೈದ್ಯರ ಸಮ್ಮುಖದಲ್ಲಿ ನಡೆಸಲಾಯಿತು.
ಗಾಯಕನ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಿದೆ.