ಸೀತಾಪುರ: ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಲೋಕಸಭಾ ಸದಸ್ಯ ಅಜಂ ಖಾನ್ 23 ತಿಂಗಳ ಬಳಿಕ ಉತ್ತರ ಪ್ರದೇಶದ ಸೀತಾಪುರದ ಜೈಲಿನಿಂದ ಹೊರಗೆ ಬಂದಿದ್ದಾರೆ. Quality Bar ಭೂಮಿ ಅತಿಕ್ರಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೈಲು ಸೇರಿದ್ದರು.
ಬ್ಲಾಕ್ ಕೋಟ್ ನೊಂದಿಗೆ ಬಿಳಿ ಕುರ್ತಾ-ಪೈಜಾಮಾ ಧರಿಸಿದ ಖಾನ್, ಖಾಸಗಿ ಕಾರಿನಲ್ಲಿ ಜೈಲು ಆವರಣದಿಂದ ತೆರಳಿದರು. ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದ ವರದಿಗಾರರೊಂದಿಗೆ ಏನನ್ನೂ ಮಾತನಾಡದೇ ಹೊರಟು ಹೋದರು.
ಅವರನ್ನು ಬರಮಾಡಿಕೊಳ್ಳಲು ಎಸ್‌ಪಿ ಶಾಸಕ ಶಿವಪಾಲ್ ಸಿಂಗ್ ಯಾದವ್, ಅಜಂ ಖಾನ್ ಅವರ ಹಿರಿಯ ಮಗ ಅದೀಬ್ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಅಜಂ ಖಾನ್ ಅವರನ್ನು ಬರಮಾಡಿಕೊಳ್ಳಲು ಸೀತಾಪುರ ಜಿಲ್ಲಾ ಕಾರಾಗೃಹದ ಹೊರಗೆ ಬೆಳಿಗ್ಗೆಯಿಂದಲೇ ಜಮಾಯಿಸಿದ್ದರು.
ಈ ವೇಳೆ ಮಾತನಾಡಿದ ಎಸ್‌ಪಿ ಶಾಸಕ ಶಿವಪಾಲ್ ಸಿಂಗ್ ಯಾದವ್, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಹೋದ್ಯೋಗಿ ಹಾಗೂ ಲೋಕಸಭೆಯ ಮಾಜಿ ಸಂಸದ ಆಜಂ ಖಾನ್ ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.
ಅಜಂಖಾನ್ ಜೈಲಿನಿಂದ ಬಿಡುಗಡೆಯನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸ್ವಾಗತಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಜಂಖಾನ್ ಮೇಲಿನ ಎಲ್ಲಾ "ಸುಳ್ಳು" ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಘೋಷಿಸಿದರು.
"ಅಜಂ ಖಾನ್ ಸಮಾಜವಾದಿ ಪಕ್ಷದ ಸಂಸ್ಥಾಪಕ ಸದಸ್ಯ ಮಾತ್ರವಲ್ಲದೆ ಸಮಾಜವಾದಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಬಹಳ ಸಂತೋಷದ ಕ್ಷಣವಾಗಿದೆ. ಕೊನೆಗೂ ಅವರಿಗೆ ನ್ಯಾಯ ಸಿಕ್ಕಿದೆ ಎಂದು ಯಾದವ್ ಸುದ್ದಿಗಾರರಿಗೆ ತಿಳಿಸಿದರು