ಇಂದೋರ್: 3 ಅಂತಸ್ತಿನ ಕಟ್ಟಡ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿ, 12 ಮಂದಿಗೆ ಗಾಯವಾಗಿರುವ ಘಟನೆ ಇಂದೋರ್‌ನ ರಾಣಿಪುರ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೃತರನ್ನು ಫಹೀಮ್ ಹಾಗೂ ಅಲಿಫಾ ಎಂದು ಗುರುತಿಸಲಾಗಿದೆ. ದೌಲತ್ ಗಂಜ್ ಪ್ರದೇಶದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನೆಲಮಾಳಿಗೆ ಸೇರಿದಂತೆ ಮೂರು ಅಂತಸ್ತಿನ ಕಟ್ಟಡವೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.
ಆರಂಭದಲ್ಲಿ ಅವಶೇಷಗಳಡಿ 13 ಮಂದಿ ಸಿಲುಕಿಕೊಂಡಿರುವುದಾಗಿ ಶಂಕಿಸಲಾಗಿತ್ತು. ಕಾರ್ಯಾಚರಣೆ ಬಳಿಕ 13 ಜನರ ಜೊತೆಗೆ ಇನ್ನೊಂದು ಮಗುವನ್ನು ಕೂಡ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಡದ ಅವಶೇಷಗಳ ಅಡಿಯಲ್ಲಿ ಒಂದೇ ಕುಟುಂಬದ 14 ಸದಸ್ಯರು ಸಿಲುಕಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಂ ವರ್ಮಾ ತಿಳಿಸಿದ್ದಾರೆ.
ಮಗು ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತಿದ್ದು, ಇದರೊಂದಿಗೆ ಕಾರ್ಯಾಚರಣೆಯಲ್ಲಿ ಒಟ್ಟು 14 ಜನರನ್ನು ರಕ್ಷಿಸಲಾಗಿದೆ. ಈ ಪೈಕಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅರವಿಂದ್ ಘಂಘೋರಿಯಾ ಅವರು ಮಾತನಾಡಿ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಅಲಿಫಾ (20) ಅವರನ್ನು ಮಹಾರಾಜ ಯಶ್ವಂತ್ ರಾವ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ಹೇಳಿದ್ದಾರೆ.
ಕಟ್ಟಡದ ಮುಂಭಾಗವನ್ನು ಇತ್ತೀಚೆಗೆ ಪುನರ್ನಿರ್ಮಿಸಲಾಗಿತ್ತು, ಆದರೆ, ಹಿಂಭಾಗವು ಹಳೆಯದಾಗಿತ್ತು. ಕಟ್ಟಡದ ಅಡಿಪಾಯದ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಮೇಯರ್ ಪುಷ್ಯಮಿತ್ರ ಭಾರ್ಗವ ಹೇಳಿದ್ದಾರೆ.