ನವದೆಹಲಿ: ಲಡಾಖ್ ಹಿಂಸಾಚಾರಕ್ಕೆ ಹೋರಾಟಗಾರ ಸೋನಂ ವಾಂಗ್ಚುಕ್ (Sonam Wangchuk) ಅವರ ಪ್ರಚೋದನಕಾರಿ ಹೇಳಿಕೆಗಳೇ ಕಾರಣ ಎಂದು ಕೇಂದ್ರ ಸರ್ಕಾರ ಗಂಭೀರ ಆರೋಪ ಮಾಡಿದೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು 6ನೇ ಪರಿಚ್ಛೇದ ಅಡಿ ಸೇರಿಸಲು ಒತ್ತಾಯಿಸಿ ದಿಢೀರ್ ಅಂತಾ ನಡೆದ ಪ್ರತಿಭಟನೆಗಳು ಹಿಂಸೆಯ ಸ್ವರೂಪ ತಾಳಿದ್ದು, ಬಂದ್ ನಡುವೆಯೂ ನಡೆದ ಹಿಂಸಾಚಾರದಲ್ಲಿ ಕನಿಷ್ಛ 4 ಮಂದಿ ಸಾವನ್ನಪ್ಪಿ, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕಂಡ ಕಂಡಲ್ಲಿ ಬೆಂಕಿ ಹಚ್ಚುತ್ತಿರುವ ಉದ್ರಿಕ್ತರ ಗುಂಪು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದಾರೆ. ಹೀಗಾಗಿ ಇದೀಗ ಲಡಾಖ್ ಕಾದ ಕಬ್ಬಿಣದಂತೆ ಆಗಿದ್ದು, ಭಾರತದ ಗಡಿ ಭಾಗದಲ್ಲಿ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣ ಆಗಿದೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು 6 ನೇ ವೇಳಾಪಟ್ಟಿಯ ಸ್ಥಾನಮಾನಕ್ಕಾಗಿ ಒತ್ತಾಯಿಸಿ ಕಳೆದ ಹದಿನೈದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರನ್ನು ಬೆಂಬಲಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಈ ಹಿಂಸಾಚಾರ ಸಂಭವಿಸಿದೆ.
ವಾಂಗ್‌ಚುಕ್ ಪ್ರಚೋದನಕಾರಿ ಹೇಳಿಕೆ ಕಾರಣ
ಇನ್ನು ಲಡಾಖ್ ಹಿಂಸಾಚಾರದ ವಿಚಾರವಾಗಿ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಕೇಂದ್ರ ಸರ್ಕಾರ, ಲಡಾಖ್ ಹಿಂಸಾಚಾರಕ್ಕೆ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಪ್ರಚೋದನಕಾರಿ ಹೇಳಿಕೆಗಳೇ ಕಾರಣ. ಬುಧವಾರ ಲಡಾಖ್‌ನಲ್ಲಿ ನಡೆದ ಹಿಂಸಾಚಾರದ ಹಿಂದೆ "ಉನ್ನತ ಅಧಿಕಾರ ಸಮಿತಿ (HPC) ಜೊತೆಗಿನ ಮಾತುಕತೆಯ ಪ್ರಗತಿಯಿಂದ ಅತೃಪ್ತರಾದ ಕೆಲವು ರಾಜಕೀಯ ಪ್ರೇರಿತ ವ್ಯಕ್ತಿಗಳು" ಹಿಂಸಾಚಾರದ ಹಿಂದೆ ಇದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವಾಲಯ, 'ಸೋನಮ್ ವಾಂಗ್‌ಚುಕ್ ತಮ್ಮ ಪ್ರಚೋದನಕಾರಿ ಹೇಳಿಕೆಗಳ ಮೂಲಕ" ಈ ಗುಂಪನ್ನು ಪ್ರಚೋದಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ವಾಂಗ್‌ಚುಕ್ ಅವರು 10-09-2025 ರಂದು ಲಡಾಖ್‌ಗೆ 6ನೇ ವೇಳಾಪಟ್ಟಿ ಮತ್ತು ರಾಜ್ಯ ಸ್ಥಾನಮಾನದ ಬೇಡಿಕೆಯನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
ಭಾರತ ಸರ್ಕಾರವು ಅಪೆಕ್ಸ್ ಬಾಡಿ ಲೇಹ್ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ಜೊತೆ ಅದೇ ವಿಷಯಗಳ ಬಗ್ಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಉನ್ನತ ಅಧಿಕಾರ ಸಮಿತಿಯ ಔಪಚಾರಿಕ ಮಾರ್ಗಗಳ ಮೂಲಕ ಮತ್ತು ಉಪ ಸಮಿತಿಯ ಮೂಲಕ ಮತ್ತು ನಾಯಕರೊಂದಿಗೆ ಬಹು ಅನೌಪಚಾರಿಕ ಸಭೆಗಳ ಮೂಲಕ ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಲಾಯಿತು" ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಅಂತೆಯೇ ಈ ಕಾರ್ಯವಿಧಾನದ ಮೂಲಕ ಸಂವಾದ ಪ್ರಕ್ರಿಯೆಯು ಅದ್ಭುತ ಫಲಿತಾಂಶಗಳನ್ನು ನೀಡಿದೆ ಎಂದು ಗಮನಿಸಿದ ಅದು, ಲಡಾಖ್ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡಾ 45 ರಿಂದ 84 ಕ್ಕೆ ಹೆಚ್ಚಿಸಲಾಗಿದೆ, ಮಂಡಳಿಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಒಪ್ಪಲಾಗಿದೆ ಮತ್ತು ಭೋಟಿ ಮತ್ತು ಪುರ್ಗಿಯನ್ನು ಅಧಿಕೃತ ಭಾಷೆಗಳೆಂದು ಘೋಷಿಸಲಾಗಿದೆ ಎಂದು ಹೇಳಿದೆ.
ಇವುಗಳು ಜಾರಿಯಲ್ಲಿರುವಾಗ, 1,800 ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. HPC ಯ ಮುಂದಿನ ಸಭೆಯನ್ನು ಅಕ್ಟೋಬರ್ 6 ರಂದು ನಿಗದಿಪಡಿಸಲಾಗಿದೆ. ಜೊತೆಗೆ "ಸೆಪ್ಟೆಂಬರ್ 25 ಮತ್ತು 26 ರಂದು ಲಡಾಖ್‌ನ ನಾಯಕರೊಂದಿಗೆ ಸಭೆಗಳನ್ನು ಸಹ ಯೋಜಿಸಲಾಗಿದೆ. ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬೇಡಿಕೆಗಳು "ಎಚ್‌ಪಿಸಿಯಲ್ಲಿ ಚರ್ಚೆಯ ಅವಿಭಾಜ್ಯ ಅಂಗವಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
"ಹಲವು ನಾಯಕರು ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರೂ, ಅವರು ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದರು. ಅರಬ್ ಸ್ಪ್ರಿಂಗ್ ಶೈಲಿಯ ಪ್ರತಿಭಟನೆಯ ಪ್ರಚೋದನಕಾರಿ ಉಲ್ಲೇಖ ಮತ್ತು ನೇಪಾಳದಲ್ಲಿ ಜೆನ್ ಝಿ ಪ್ರತಿಭಟನೆಗಳ ಉಲ್ಲೇಖಗಳ ಮೂಲಕ ಜನರನ್ನು ದಾರಿ ತಪ್ಪಿಸಿದರು" ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ಆರೋಪಿಸಿದೆ.
ಆದಾಗ್ಯೂ, ದಿನದ ಆರಂಭದಲ್ಲಿ ನಡೆದ ದುರದೃಷ್ಟಕರ ಘಟನೆಗಳನ್ನು ಹೊರತುಪಡಿಸಿ, ಮಧ್ಯಾಹ್ನ 4 ಗಂಟೆಯ ಹೊತ್ತಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು ಮತ್ತು ಸೋನಮ್ ವಾಂಗ್‌ಚುಕ್ ತಮ್ಮ ಪ್ರಚೋದನಕಾರಿ ಹೇಳಿಕೆಗಳ ಮೂಲಕ" ಜನಸಮೂಹವನ್ನು ಪ್ರಚೋದಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೂ ಅವರು ಉಪವಾಸವನ್ನು ಮುರಿದು ಪರಿಸ್ಥಿತಿಯನ್ನು ನಿಯಂತ್ರಿಸಲು ಗಂಭೀರ ಪ್ರಯತ್ನಗಳನ್ನು ಮಾಡದೆ ಆಂಬ್ಯುಲೆನ್ಸ್‌ನಲ್ಲಿ ತಮ್ಮ ಗ್ರಾಮಕ್ಕೆ ತೆರಳಿದರು.
ಸರ್ಕಾರವು ಸಾಕಷ್ಟು ಸಾಂವಿಧಾನಿಕ ರಕ್ಷಣೆಗಳನ್ನು ಒದಗಿಸುವ ಮೂಲಕ ಲಡಾಖ್ ಜನರ ಆಕಾಂಕ್ಷೆಗೆ ಬದ್ಧವಾಗಿದೆ ಎಂದು ಗೃಹ ಸಚಿವಾಲಯ ಘೋಷಿಸಿತು ಮತ್ತು "ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಳೆಯ ಮತ್ತು ಪ್ರಚೋದನಕಾರಿ ವೀಡಿಯೊಗಳನ್ನು ಪ್ರಸಾರ ಮಾಡಬೇಡಿ" ಎಂದು ಗೃಹ ಸಚಿವಾಲಯ ಜನರಿಗೆ ಸಲಹೆ ನೀಡಿತು.
ಗಡಿ ಭಾಗದಲ್ಲಿ ಭಾರಿ ಕಟ್ಟೆಚ್ಚರ
ಭಾರತ ದೇಶದ ಸುತ್ತಲೂ ಶತ್ರುಗಳ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಭಾರತದ ಗಡಿಯಲ್ಲಿ ನಡೆದಿರುವ ಈ ಪ್ರತಿಭಟನೆಗಳ ಲಾಭ ಪಡೆಯಲು ಶತ್ರುಗಳು ಪ್ರಯತ್ನ ಮಾಡುತ್ತಿರುವ ಅನುಮಾನ ಕೂಡ ಇದೀಗ ಮೂಡಿದೆ.
ಹೀಗಾಗಿ ಇದೀಗ ಭಾರತದ ಗಡಿ ಭಾಗದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದ್ದು, ಲಡಾಖ್ ನೆಲದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಕಿರಾತಕರನ್ನ ಈಗ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಖುದ್ದು ಸೇನೆ ಅಖಾಡಕ್ಕೆ ಎಂಟ್ರಿ ಕೊಟ್ಟು ಹಿಂಸಾಚಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಹೋರಾಟ ಅಂತಾ ಪ್ರತಿಭಟನೆ ಶುರು ಮಾಡಿದ್ದವರು ಈಗ ಹಿಂಸೆಗೆ ಇಳಿದಿದ್ದು ಭಾರಿ ಅನುಮಾನ ಮೂಡಿಸಿದೆ.