ಚಂಡೀಗಢ: ಬರೊಬ್ಬರಿ 60 ವರ್ಷಗಳ ಕಾಲ ಭಾರತೀಯ ಸೇನೆಯ ಬೆನ್ನೆಲುಬಾಗಿದ್ದ ಮಿಗ್ 21 ಫೈಟರ್ ಜೆಟ್ (MiG-21 fighter jet) ವಿಮಾನಗಳಿಗೆ ಕೊನೆಗೂ ಅಂತಿಮ ವಿದಾಯ ಹೇಳುವ ಕಾಲ ಸನ್ನಿಹತವಾಗಿದೆ.
ಹೌದು... ಆರು ದಶಕಗಳಿಗೂ ಅಧಿಕ ಕಾಲ ಭಾರತೀಯ ವಾಯು ಪಡೆಯ ಬೆನ್ನೆಲುಬಾಗಿದ್ದ ರಷ್ಯಾ ನಿರ್ಮಿತ ಮಿಗ್-21 ಯುದ್ಧ ವಿಮಾನ ಸೆಪ್ಟಂಬರ್ 26ರಂದು ಸೇವೆಯಿಂದ ನಿವೃತ್ತಿ ಪಡೆಯಲಿದೆ.
ನಂಬರ್ 23 ಸ್ಕ್ವಾಡ್ರನ್‌ನ ಮಿಗ್-21 ಯುದ್ಧ ವಿಮಾನಗಳ ಪೈಕಿ ಕೊನೆಯ ಯುದ್ಧ ವಿಮಾನವಾಗಿರುವ, ‘‘ಪ್ಯಾಂಥರ್’’ ಎಂದು ಕರೆಯಲಾಗುವ ಮಿಗ್-21 ಯುದ್ಧ ವಿಮಾನದ ವಿದಾಯ ಕಾರ್ಯಕ್ರಮವನ್ನು ಚಂಡೀಗಢದ ವಾಯು ಪಡೆಯ ವಾಯುನೆಲೆಯಲ್ಲಿ ಆಯೋಜಿಸಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ (ಸಿಡಿಆರ್), ಸೇನಾ ವರಿಷ್ಠ ಜನರಲ್ ಉಪೇಂದ್ರ ದ್ವಿವೇದಿ, ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಹಾಗೂ ನೌಕಾ ಪಡೆಯ ವರಿಷ್ಠ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಶುಕ್ರವಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಭಾರತೀಯ ವಾಯು ಪಡೆಯ ವಾಯು ನೆಲೆಯಲ್ಲಿ ಬುಧವಾರ ಸಮವಸ್ತ್ರ ಧರಿಸಿ ಅಭ್ಯಾಸ ನಡೆಸಲಾಯಿತು.
60 ವರ್ಷಗಳ ಸುದೀರ್ಘ ಸೇವೆ
ಆರು ದಶಕ ಭಾರತೀಯ ಸೇನೆಯ ಬೆನ್ನೆಲುಬಾಗಿದ್ದ ಮಿಗ್–21 ಯುದ್ಧ ವಿಮಾನಗಳು ಪಾಕಿಸ್ತಾನದೊಂದಿಗಿನ 1965 ಮತ್ತು 1971ರ ಯುದ್ಧದಲ್ಲಿ ಹಾಗೂ 1999ರ ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. 2019ರ ಬಾಲಾಕೋಟ್ ವಾಯುದಾಳಿಯಲ್ಲಿಯೂ ಮಹತ್ವದ ಮಾತ್ರ ವಹಿಸಿದ್ದವು.