ಲಡಾಖ್: ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು ಆರನೇ ಪರಿಚ್ಛೇದದಡಿಯಲ್ಲಿ ಸೇರಿಸುವಂತೆ ಒತ್ತಾಯಿಸಿ ಬುಧವಾರ ನಡೆಸಲಾಗುತ್ತಿದ್ದ ಪ್ರತಿಭಟನೆ ಮತ್ತು ಬಂದ್ ಹಿಂಸಾಚಾರಕ್ಕೆ ತಿರುಗಿದ್ದು, ಬಿಜೆಪಿ ಕಚೇರಿ ಮತ್ತು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಇಂದು ನೂರಾರು ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಲೇಹ್ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಸಹ ನಡೆಸಿದರು. ನಂತರ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿ ಲಾಠಿ ಪ್ರಹಾರ ನಡೆಸಿದರು.
ಇದೀಗ ಹವಾಮಾನ ಹೋಟಗಾರ ಸೋನಮ್ ವಾಂಗ್‌ಚುಕ್ ಅವರು ತಮ್ಮ 15 ದಿನಗಳ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.
"ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ನಾನು ಲಡಾಖ್‌ನ ಯುವಕರನ್ನು ವಿನಂತಿಸುತ್ತೇನೆ. ಏಕೆಂದರೆ ಅದು ನಮ್ಮ ಉದ್ದೇಶಕ್ಕೆ ಹಾನಿಯನ್ನುಂಟುಮಾಡುತ್ತದೆ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ನಾವು ಲಡಾಖ್ ಮತ್ತು ದೇಶದಲ್ಲಿ ಅಸ್ಥಿರತೆಯನ್ನು ಬಯಸುವುದಿಲ್ಲ" ಎಂದು ಮುಷ್ಕರದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ತಮ್ಮ ಬೆಂಬಲಿಗರಿಗೆ ವಾಂಗ್‌ಚುಕ್ ಹೇಳಿದರು.
ಹಿಂಸಾಚಾರ ತೀವ್ರಗೊಳ್ಳುತ್ತಿದ್ದಂತೆ, ವಾಂಗ್‌ಚುಕ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಸಂದೇಶ ಬಿಡುಗಡೆ ಮಾಡಿ, ಯುವಕರು ಶಾಂತಿಯುತವಾಗಿರಬೇಕು ಮತ್ತು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಲಡಾಖ್ ರಾಜಧಾನಿಯಲ್ಲಿ ಸಂಪೂರ್ಣ ಬಂದ್ ನಡುವೆಯೂ ಬೆಂಕಿ ಜ್ವಾಲೆಗಳು ಮತ್ತು ನಗರದಾದ್ಯಂತ ಹೊಗೆ ಆವರಿಸಿತ್ತು. ಐದು ಅಥವಾ ಅದಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲು ಸರ್ಕಾರ ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.