ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಿಹಾರದ "ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ"ಗೆ ಚಾಲನೆ ನೀಡಲಿದ್ದು, ರಾಜ್ಯಾದ್ಯಂತ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ವರ್ಗಾಯಿಸುವ ಮೂಲಕ ಒಟ್ಟು 7,500 ಕೋಟಿ ರೂ. ಮಹಿಳೆಯರ ಖಾತೆಗೆ ಜಮೆ ಮಾಡಲಿದ್ದಾರೆ.
ಈ ಯೋಜನೆಯು ಮಹಿಳೆಯರನ್ನು "ಆತ್ಮನಿರ್ಭರ್"(ಸ್ವಾವಲಂಬಿ)ರನ್ನಾಗಿ ಮಾಡುವುದು ಮತ್ತು ಸ್ವ-ಉದ್ಯೋಗ ಹಾಗೂ ಜೀವನೋಪಾಯದ ಅವಕಾಶಗಳ ಮೂಲಕ ಸಬಲೀಕರಣವನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆ ಅಡಿಯಲ್ಲಿ ರಾಜ್ಯದ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಆರ್ಥಿಕ ನೆರವು ನೀಡಲಾಗುವುದು. ಈ ಹಣ ಅವರು ತಮ್ಮ ಆಯ್ಕೆಯ ಉದ್ಯೋಗ ಅಥವಾ ಜೀವನೋಪಾಯ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.
10,000 ರೂ.ಗಳ ಆರಂಭಿಕ ಅನುದಾನವನ್ನು ನೀಡಲಾಗುವುದು, ನಂತರ ಹಂತ ಹಂತವಾಗಿ 2 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ಬೆಂಬಲ ನೀಡುವ ಸಾಧ್ಯತೆ ಇದೆ ಅವರು ಹೇಳಿದರು.
ಈ ಯೋಜನೆಯು ಸಮುದಾಯ ಆಧಾರಿತವಾಗಿರುತ್ತದೆ ಮತ್ತು ಸ್ವ-ಸಹಾಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ ಸಂಪನ್ಮೂಲ ವ್ಯಕ್ತಿಗಳು ಅವರ ಪ್ರಯತ್ನವನ್ನು ಬೆಂಬಲಿಸಲು ತರಬೇತಿ ನೀಡುತ್ತಾರೆ. ಅವರ ಉತ್ಪನ್ನಗಳ ಮಾರಾಟವನ್ನು ಬೆಂಬಲಿಸಲು, "ಗ್ರಾಮೀಣ ಹಾತ್" (ಗ್ರಾಮೀಣ ಮಾರುಕಟ್ಟೆ) ಅನ್ನು ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.