ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗಿನ ಬಾಂಧವ್ಯದ ಬಗ್ಗೆ ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯವರ್ಗಿಯಾ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಾಜಾಪುರದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೈಲಾಶ್ ವಿಜಯ ವರ್ಗಿಯಾ, ನಾವು ಹಳೆಯ ಸಂಸ್ಕೃತಿಯ ಜನ. ನಮ್ಮ ಸಹೋದರಿಯರ ಹಳ್ಳಿಯಲ್ಲಿ ನಾವು ನೀರನ್ನು ಸಹ ಕುಡಿಯುವುದಿಲ್ಲ. ಜಿರಾಪುರದಲ್ಲಿ, ನನ್ನ ಚಿಕ್ಕಮ್ಮ ವಾಸಿಸುತ್ತಿದ್ದರು. ನನ್ನ ತಂದೆ ಮನೆಯಿಂದ ನೀರಿನ ಮಡಕೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಇಂದು ನಮ್ಮ ವಿರೋಧ ಪಕ್ಷದ ನಾಯಕರು ತಮ್ಮ ಸಹೋದರಿಯನ್ನು ರಸ್ತೆಯಲ್ಲಿ ಚುಂಬಿಸುತ್ತಾರೆ. ನಮ್ಮಲ್ಲಿ ಯಾರಾದರೂ ಈ ರೀತಿ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಅದು ರಾಹುಲ್ ಗಾಂಧಿ ಅವರ ವಿದೇಶಿ ಮೌಲ್ಯಗಳನ್ನು ತೋರಿಸುತ್ತೆ. ಪ್ರಧಾನಿ ಮೋದಿ ಅವರ ಬಗ್ಗೆಯೂ ಕೆಟ್ಟದಾಗಿ ಮಾತನಾಡ್ತಾರೆ ಅಂದಿದ್ದಾರೆ.
ಬಳಿಕ NDTV ಜೊತೆಗೆ ಮಾತನಾಡಿದ ವಿಜಯ ವರ್ಗಿಯಾ, ಇದು ರಾಹುಲ್ ಗಾಂಧಿಯ ತಪ್ಪಲ್ಲಾ. ಅವರು ವಿದೇಶದಲ್ಲಿ ಬೆಳೆದಿದ್ದು, ಅಲ್ಲಿನ ಮೌಲ್ಯಗಳನ್ನು ಕಲಿತಿದ್ದಾರೆ. ಭಾರತದ ಸಂಪ್ರದಾಯ ಅವರಿಗೆ ಅರ್ಥವಾಗಲ್ಲ. ಪ್ರಧಾನಿ ಮೋದಿಯನ್ನು ಥೂ ಅಂತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಕೈಲಾಶ್ ವಿಜಯವರ್ಗೀಯವರು ಪವಿತ್ರ ಸಹೋದರ-ಸಹೋದರಿಯರ ಬಾಂಧವ್ಯ ಅವಮಾನಿಸಲು ನವರಾತ್ರಿ ಹಬ್ಬ ಆಯ್ಕೆ ಮಾಡಿದ್ದಾರೆ. ಅವರ ಭಾಷೆ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಪದೇ ಪದೇ ಮಹಿಳೆಯರನ್ನು ಅವಮಾನಿಸುತ್ತಿರುತ್ತಾರೆ. ಇಂತಹ ನಾಚಿಕೆಯಿಲ್ಲದ ಹೇಳಿಕೆಗೆ ಪ್ರತಿಕ್ರಿಯಿಸಲು ನಮಗೆ ನಾಚಿಕೆಯಾಗುತ್ತದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ ಕಿಡಿಕಾರಿದ್ದಾರೆ.