ತಮಿಳುನಾಡಿನ ಕರೂರಿನಲ್ಲಿ ನಟ ಮತ್ತು ಟಿವಿಕೆ (ತಮಿಳಗ ವೆಟ್ರಿ ಕಳಗಂ) ಮುಖ್ಯಸ್ಥ ವಿಜಯ್ ಅವರ ರ‍್ಯಾಲಿಯಲ್ಲಿ ದೊಡ್ಡ ದುರಂತ ಸಂಭವಿಸಿದೆ. ಜನಸಮೂಹ ಇದ್ದಕ್ಕಿದ್ದಂತೆ ನಿಯಂತ್ರಿಸಲಾಗದೆ ಕಾಲ್ತುಳಿತ ಸಂಭವಿಸಿದ್ದು ಎಂಟು ಮಕ್ಕಳು ಸೇರಿದಂತೆ ಸುಮಾರು 36ಕ್ಕೂ ಹೆಚ್ಚು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಮಂದಿ ಸ್ಥಿತಿ ಚಿಂತಾಜನಕವಾಗಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿಗದಿತ ಸಮಯಕ್ಕಿಂತ 6 ಗಂಟೆ ತಡವಾಗಿ ವಿಜಯ್ ಸ್ಥಳಕ್ಕೆ ಬಂದಿದ್ದರು. ಇನ್ನು ವಿಜಯ್ ಬರುತ್ತಿದ್ದಂತೆ ವೇದಿಕೆಯತ್ತ ಸಾವಿರಾರೂ ಸಂಖ್ಯೆಯಲ್ಲಿ ಜನ ನುಗ್ಗಲು ಪ್ರಾರಂಭಿಸಿದರು. ಈ ವೇಳೆ ಜನಸಂದಣಿ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ.
ಕಾಲ್ತುಳಿತದ ವೇಳೆ ಹಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಹಲವು ಮಕ್ಕಳು ಕಾಣೆಯಾಗಿವೆ ಎಂದು ವರದಿಯಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ವಿಜಯ್ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿ ಕಾರ್ಯಕರ್ತರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವಂತೆ ಕೇಳಿಕೊಂಡರು.
ಟಿವಿಕೆ ಪಕ್ಷದ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ಕುರಿತಂತೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕರೂರ್ ಜಿಲ್ಲಾಧಿಕಾರಿಗೆ ಸ್ಥಳಕ್ಕೆ ಧಾವಿಸಿ ವೈದ್ಯಕೀಯ ನೆರವು ನೀಡುವಂತೆ ಸೂಚಿಸಿದರು. ಆರೋಗ್ಯ ಸಚಿವರು ಮತ್ತು ಶಾಲಾ ಶಿಕ್ಷಣ ಸಚಿವರು ಕರೂರ್ ಗೆ ತೆರಳುವಂತೆ ಸೂಚಿಸಿದ್ದಾರೆ.
10 ಸಾವಿರ ಮಂದಿ ಸೇರುವ ನಿರೀಕ್ಷೆ ಇತ್ತು. ಹೀಗಾಗಿ ಪೊಲೀಸರಿಗೆ ಭದ್ರತೆ ನೀಡುವಂತೆ ವಿಜಯ್ ಕೇಳಿಕೊಂಡಿದ್ದರು. ಆದರೆ ಅಂದಾಜಿನ ಪ್ರಕಾರ ಸುಮಾರು 30,000 ಜನರು ರ‍್ಯಾಲಿಗೆ ಸೇರಿದ್ದು ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಇನ್ನು ಡಿಎಂಕೆ ಪಕ್ಷ ಈ ಕಾಲ್ತುಳಿತಕ್ಕೆ ವಿಜಯ್ ಅವರ ನಿರ್ಲಕ್ಷ್ಯಕ್ಕೆ ಕಾರಣ ಎಂದು ದೂಷಿಸಿದ್ದು, ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದೆ.