ಕರೂರು: ತಮಿಳುನಾಡಿನ ಕರೂರಿನಲ್ಲಿ ನಟ ಮತ್ತು ಟಿವಿಕೆ (ತಮಿಳಗ ವೆಟ್ರಿ ಕಳಗಂ) ಮುಖ್ಯಸ್ಥ ವಿಜಯ್ ಅವರ ರ‍್ಯಾಲಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ಕಾಲ್ತುಳಿತದಲ್ಲಿ ಎಂಟು ಮಕ್ಕಳು, 16 ಮಹಿಳೆಯರು ಸೇರಿದಂತೆ ಮೂವತ್ತಾರು ಜನರು ಸಾವನ್ನಪ್ಪಿದ್ದಾರೆ.
ಅವರಲ್ಲಿ ಕೆಲವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಮಂದಿ ಸ್ಥಿತಿ ಚಿಂತಾಜನಕವಾಗಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡಿನ ಕರೂರಿನಲ್ಲಿ ರಾಜಕೀಯ ಸಮಾವೇಶದ ವೇಳೆ ನಡೆದ ಅಹಿತಕರ ಘಟನೆ ತೀವ್ರ ದುಃಖ ತಂದಿದೆ ಎಂದಿದ್ದಾರೆ.
ನನ್ನ ಆಲೋಚನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಇವೆ. ಈ ಸಂಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವುದಾಗಿ ಟ್ವೀಟ್ ಮಾಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಕಾಲ್ತುಳಿತ ಘಟನೆ ತೀವ್ರ ಕಳವಳ ಮೂಡಿಸಿದ್ದು, ಪರಿಸ್ಥಿತಿಯನ್ನು ತ್ವರಿತಗತಿಯಲ್ಲಿ ನಿರ್ವಹಿಸಲು ಹಾಗೂ ಕಾಲ್ತುಳಿತದಲ್ಲಿ ಸಿಲುಕಿ ಗಾಯಗೊಂಡ ಜನರನ್ನು ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ನೆರವು ಕಲ್ಪಿಸುವಂತೆ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಹಾಗೂ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.