ಮುಂಬೈ: ದಿಢೀರ್ ಸುರಿದ ಭಾಳೆಯಿಂದಾಗಿ ದೇಶದ ವಾಣಿಜ್ಯ ರಾಜಧಾನಿ ಖ್ಯಾತಿಯ ಮುಂಬೈ ತತ್ತರಿಸಿ ಹೋಗಿದ್ದು, ಇಡೀ ದಕ್ಷಿಣ ಮುಂಬೈ ಪ್ರವಾಹದಲ್ಲಿ ಮುಳುಗಿದೆ.
ಹೌದು.. ಕಳೆದ 24 ಗಂಟೆಗಳಲ್ಲಿ ದಕ್ಷಿಣ ಮುಂಬೈನ ಕೆಲವು ಭಾಗಗಳಲ್ಲಿ 100 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ.
'ರೆಡ್ ಅಲರ್ಟ್' ಎಚ್ಚರಿಕೆಯ ನಡುವೆಯೂ, ಮುಂಬೈನಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದ್ದು, ಭಾನುವಾರ ಬೆಳಗಿನ ಜಾವದ ವೇಳೆಗೆ ತೀವ್ರತೆ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದಕ್ಷಿಣ ಮುಂಬೈನ ಕೆಲವು ಭಾಗಗಳಲ್ಲಿ 100 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ.
ಮಳೆಯಿಂದಾಗಿ ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆಯ ಸ್ಥಳೀಯ ರೈಲು ಸೇವೆಗಳು ವಿಳಂಬಗೊಂಡವು. ಅಂತೆಯೇ ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (BEST) ಸಂಸ್ಥೆಯ ಬಸ್‌ಗಳು ಯಾವುದೇ ಮಾರ್ಗ ಬದಲಾವಣೆಯಿಲ್ಲದೆ ಎಂದಿನಂತೆ ಸೇವೆ ಮುಂದುವರಿಸಿದೆಯಾದರೂ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಸೇವೆಯಲ್ಲಿ ವ್ಯತ್ಯಯವಾಗಿದೆ.
ಇನ್ನು ಶನಿವಾರ ಮುಂಬೈ ಮಳೆ ಕುರಿತು ಮಾಹಿತಿ ನೀಡಿದ್ದ, ಹವಾಮಾನ ಇಲಾಖೆ "ಭಾರೀಯಿಂದ ಅತಿ ಹೆಚ್ಚಿನ" ಮಳೆಯಾಗುವ ಮುನ್ಸೂಚನೆ ನೀಡಿತ್ತು. ಭಾನುವಾರ ಬೆಳಿಗ್ಗೆ 8 ಗಂಟೆಗೆ ನೀಡಲಾದ IMD ಯ ಮುನ್ಸೂಚನೆಯನ್ನು ಉಲ್ಲೇಖಿಸಿ ನಾಗರಿಕ ಅಧಿಕಾರಿಯೊಬ್ಬರು, ನಗರ ಮತ್ತು ಉಪನಗರಗಳಲ್ಲಿ "ಮೋಡ ಕವಿದ ಆಕಾಶದೊಂದಿಗೆ ಭಾರೀ ಅಥವಾ ಅತಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ" ಎಂದು ಹೇಳಿದರು.
ಮಧ್ಯರಾತ್ರಿ ಸುರಿದ ಭಾರಿ ಮಳೆ
ಮುಂಬೈನಲ್ಲಿ ಮಧ್ಯರಾತ್ರಿಯ ನಂತರ ಭಾರೀ ಮಳೆಯಾಯಿತು, ಬೆಳಗಿನ ಜಾವದ ವರೆಗೂ ಮುಂದುವರೆದ ಮಳೆ, ಬೆಳಗಿನ ಜಾವ ತೀವ್ರತೆ ಕಡಿಮೆಯಾಯಿತು. ನಗರದ ಹೆಚ್ಚಿನ ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುತ್ತಿದೆ, ಮಧ್ಯಂತರ ಪ್ರಮಾಣದ ತೀವ್ರ ಮಳೆಯಾಗಿದೆ.
ಭಾನುವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ, ಕೊಲಾಬಾ ವೀಕ್ಷಣಾಲಯ (ದ್ವೀಪ ನಗರದ ಪ್ರತಿನಿಧಿ) 120.8 ಮಿಮೀ ಮಳೆಯನ್ನು ದಾಖಲಿಸಿದೆ, ಆದರೆ ಸಾಂತಾಕ್ರೂಜ್ ವೀಕ್ಷಣಾಲಯ (ಉಪನಗರಗಳನ್ನು ಪ್ರತಿನಿಧಿಸುತ್ತದೆ) 83.8 ಮಿಮೀ ಮಳೆಯನ್ನು ದಾಖಲಿಸಿದೆ.
ದಾಖಲೆಯ 100 ಎಂಎಂ ಮಳೆ
ದಕ್ಷಿಣ ಮುಂಬೈನಲ್ಲಿ ಶನಿವಾರ ರಾತ್ರಿ ಭಾರಿ ಮಳೆಯಾಗಿದ್ದು, ಇಡೀ ರಾತ್ರಿ ಬರೊಬ್ಬರಿ 100 ಎಂಎಂ ಮಳೆಯಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ, ಜುಹು 88 ಮಿಮೀ, ಬಾಂದ್ರಾ 82.5 ಮಿಮೀ ಮತ್ತು ಮಹಾಲಕ್ಷ್ಮಿಯಲ್ಲಿ 28 ಮಿಮೀ ಮಳೆಯಾಗಿದೆ. ಐಎಂಡಿ ಭಾನುವಾರ ನೆರೆಯ ರಾಯಗಢ, ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಿದೆ.