ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್ ಜನರಿಗೆ "ದ್ರೋಹ" ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ. ಅಲ್ಲದೆ ಕೇಂದ್ರಾಡಳಿತ ಪ್ರದೇಶದಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ನಾಲ್ವರು ಪ್ರತಿಭಟನಾಕಾರರ ಸಾವಿನ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ಬುಧವಾರ ಲಡಾಖ್‌ನಲ್ಲಿ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಕಾರ್ಗಿಲ್ ಯುದ್ಧದ ಯೋಧ ತ್ಸೆವಾಂಗ್ ಥಾರ್ಚಿನ್ ಕೂಡ ಸೇರಿದ್ದಾರೆ.
ದಕ್ಷಿಣ ಅಮೆರಿಕಾದ ನಾಲ್ಕು ರಾಷ್ಟ್ರಗಳ ಪ್ರವಾಸದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಥಾರ್ಚಿನ್ ಅವರ ತಂದೆಯ ವಿಡಿಯೋವನ್ನು X ನಲ್ಲಿ ಪೋಸ್ಟ್ ಮಾಡಿ, "ತಂದೆ ಸೈನ್ಯದಲ್ಲಿ, ಮಗ ಸೈನ್ಯದಲ್ಲಿ - ದೇಶಭಕ್ತಿ ಅವರ ರಕ್ತದಲ್ಲಿ ಹರಿಯುತ್ತದೆ" ಎಂದು ಹೇಳಿದ್ದಾರೆ.
ಆದರೂ ಬಿಜೆಪಿ ಸರ್ಕಾರ, ಈ ಧೈರ್ಯಶಾಲಿ ದೇಶದ ಮಗನನ್ನು ಗುಂಡಿಕ್ಕಿ ಕೊಂದಿತು, ಏಕೆಂದರೆ ಅವರು ಲಡಾಖ್ ಮತ್ತು ಅವರ ಹಕ್ಕುಗಳಿಗಾಗಿ ಹೋರಾಟಕ್ಕೆ ನಿಂತಿದ್ದರು" ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ತಂದೆಯ ನೋವು ತುಂಬಿದ ಕಣ್ಣುಗಳು ಒಂದು ಪ್ರಶ್ನೆಯನ್ನು ಕೇಳುತ್ತಿವೆ, ಇದು ದೇಶ ಸೇವೆ ಸಲ್ಲಿಸಿದ್ದಕ್ಕೆ ಸಿಕ್ಕ ಪ್ರತಿಫಲವೇ? ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
"ಲಡಾಖ್‌ನಲ್ಲಿ ನಡೆದ ಈ ಹತ್ಯೆಗಳ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ..." (ಪ್ರಧಾನಿ ನರೇಂದ್ರ) ಮೋದಿ ಜಿ, ನೀವು ಲಡಾಖ್ ಜನರಿಗೆ ದ್ರೋಹ ಮಾಡಿದ್ದೀರಿ. ಅವರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. "ಅವರೊಂದಿಗೆ ಮಾತುಕತೆ ನಡೆಸಿ - ಹಿಂಸೆ ಮತ್ತು ಭಯದ ರಾಜಕೀಯ ನಿಲ್ಲಿಸಿ" ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ಒತ್ತಾಯಿಸಿದ್ದಾರೆ.