ರಾಜ್ಯಸಭೆಯಲ್ಲಿ ಮಹತ್ವದ ಬದಲಾವಣೆಯೊಂದರಲ್ಲಿ, ರಾಜ್ಯಸಭಾಧ್ಯಕ್ಷ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಆಮ್ ಆದ್ಮಿ ಪಕ್ಷದ (AAP) ಏಳು ಸಂಸದರು ಭಾರತೀಯ ಜನತಾ ಪಕ್ಷ (BJP) ಜೊತೆ ವಿಲೀನಗೊಂಡಿರುವುದನ್ನು ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಇಂದು ಸೋಮವಾರ ಪ್ರಕಟವಾದ ಈ ನಿರ್ಧಾರದಿಂದ ರಾಜ್ಯಸಭೆಯಲ್ಲಿ ಆಪ್ ಬಲವು 10ರಿಂದ 3ಕ್ಕೆ ಇಳಿದಿದ್ದು, ಬಿಜೆಪಿಯ ಸದಸ್ಯರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.
ಈ ಕ್ರಮವನ್ನು ರಾಘವ್ ಚಡ್ಡಾ, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಮುನ್ನಡೆಸಿದರು. ಇವರು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ಪಕ್ಷ ಪ್ರವೇಶವನ್ನು ಅಧಿಕೃತಗೊಳಿಸಿದರು. ಈ ಗುಂಪಿನಲ್ಲಿ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಸ್ವಾತಿ ಮಾಲಿವಾಲ್, ವಿಕ್ರಮ್‌ಜಿತ್ ಸಿಂಗ್ ಸಾಹ್ನೆ ಮತ್ತು ರಾಜಿಂದರ್ ಗುಪ್ತಾ ಕೂಡ ಸೇರಿದ್ದಾರೆ. ಪಕ್ಷದ ಮೂಲ ಭ್ರಷ್ಟಾಚಾರ ವಿರೋಧಿ ತತ್ವಗಳಿಂದ ದೂರವಾಗಿರುವುದು ಹಾಗೂ ಆಪ್ ನಲ್ಲಿ ಉಸಿರುಗಟ್ಟುವ ರೀತಿಯ ಪರಿಸ್ಥಿತಿಯಿಂದ ಪಕ್ಷ ತೊರೆದಿದ್ದೇವೆ ಎಂದು ಹೇಳಿದರು.
ಈ ಏಳು ಸದಸ್ಯರು ಸೇರಿ ಸಂವಿಧಾನದ 10ನೇ ಅನುಸೂಚಿಯ ಪ್ರಕಾರ ಅಗತ್ಯವಾದ ಮೂರನೇ ಎರಡು ಪ್ರಮಾಣವನ್ನು ಪೂರೈಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ವಿರೋಧ ಪಕ್ಷ ತೊರೆದ ಕಾರಣಕ್ಕೆ ಅನರ್ಹತೆಯಿಂದ ತಪ್ಪಿಸಿಕೊಳ್ಳಬಹುದು.
ಇದಕ್ಕೆ ಪ್ರಆಪ್ ಪ್ರತಿಯಾಗಿ ಆಪ್, ರಾಜ್ಯಸಭಾಧ್ಯಕ್ಷರ ಮುಂದೆ ಈ ಏಳು ಸಂಸದರನ್ನು ತಕ್ಷಣವೇ ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದೆ. ಹಿರಿಯ ನಾಯಕ ಸಂಜಯ್ ಸಿಂಗ್ ಈ ವಿಲೀನವನ್ನು “ಸಂವಿಧಾನಿಕ ವಂಚನೆ” ಮತ್ತು “ಪಂಜಾಬ್ ಜನರ ಆದೇಶಕ್ಕೆ ದ್ರೋಹ” ಎಂದು ಆರೋಪಿಸಿದ್ದಾರೆ. ಬಿಜೆಪಿ ಕೇಂದ್ರ ಸಂಸ್ಥೆಗಳನ್ನು ಬಳಸಿಕೊಂಡು ಸಂಸದರನ್ನು ಒತ್ತಡಕ್ಕೆ ಒಳಪಡಿಸಿದೆ ಹೇಳಿದರು.
245 ಸದಸ್ಯರ ರಾಜ್ಯಸಭೆಯ ಬಿಜೆಪಿ ಸದಸ್ಯರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಎನ್ ಡಿಎ ಒಕ್ಕೂಟದ ಒಟ್ಟು ಬಲ 141ಕ್ಕೆ ತಲುಪಿದೆ. ಇದರಿಂದ ಸರ್ಕಾರಕ್ಕೆ ಸರಳ ಬಹುಮತದತ್ತ ಮಹತ್ವದ ಮುನ್ನಡೆ ದೊರೆತಿದೆ.